ಕಲಬುರಗಿ: ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯ ಸತತ ಶೋಧ ಕಾರ್ಯದಿಂದಾಗಿ ನಿನ್ನೆ (ಆ.20) ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಮೃತ ದೇಹ ಇಂದು ಪತ್ತೆಯಾಗಿದೆ.
ನಗರದ ದುಬೈ ಕಾಲೋನಿ ನಿವಾಸಿ ಮಲ್ಲಿಕಾರ್ಜುನ (12) ಮೃತ ದುರ್ದೈವಿಯಾಗಿದ್ದಾನೆ. ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿಕೊಂಡು ನಿಂತಿರುವ ಬೊಸಗಾ ಕೆರೆ ಸೋಬಗನ್ನು ವೀಕ್ಷಿಸಲು ಡಬರಾಬಾದ್ ಗ್ರಾಮದ 22 ವರ್ಷದ ಯುವಕ ವಿಶ್ವರಾಧ್ಯನ ಜೊತೆಗೆ ಮಲ್ಲಿಕಾರ್ಜುನ ಬೈಕ್ ಮೇಲೆ ತೆರಳಿದ್ದನು ಎನ್ನಲಾಗಿದೆ.
ಈ ವೇಳೆ ಭೀಮಳ್ಳಿ ಗ್ರಾಮದ ಹಳ್ಳದ ಸೇತುವೆ ಮೇಲೆ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ದಾಟಲು ಪ್ರಯತ್ನಿಸಿ ಬೈಕ್ ಸಮೇತ ಇಬ್ಬರು ನೀರು ಪಾಲಾಗಿದ್ದರು. ವಿಶ್ವರಾಧ್ಯ ಈಜಿಕೊಂಡು ಗ್ರಾಮಸ್ಥರ ಸಹಾಯದಿಂದ ದಡ ಸೇರಿದ್ದನು.
ಎನ್ಡಿಆರ್ಎಫ್ ಸಿಬ್ಬಂದಿಯ ಸತತ ಶೋಧನೆ ಕಾರ್ಯದಿಂದ ಇಂದು ಸಂಜೆ ಬೈಕ್ ಪತ್ತೆಯಾಗಿತ್ತು. ಬಳಿಕ ಮತ್ತೆ ಶೋಧ ಕಾರ್ಯ ಮುಂದುವರೆಸಿದಾಗ ಎರಡು ಗಂಟೆಗಳ ಬಳಿಕ ಬಾಲಕನ ಶವ ಕೂಡಾ ಪತ್ತೆಯಾಗಿದೆ. ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.