ಕಲಬುರಗಿ: ನಾಳೆ ನಗರದಲ್ಲಿ ಬಿಜೆಪಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಬಳಿ ಇರುವ ರದ್ದೆವಾಡಗಿ ಲೇಔಟ್ನಲ್ಲಿ ಸಮಾವೇಶಕ್ಕೆ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಬೃಹತ್ ಒಬಿಸಿ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ರಾಜ್ಯದ ಹಲವಡೆಯಿಂದ ಸುಮಾರು 5 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಸಮಾವೇಶಕ್ಕೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯುರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಳಗೊಂಡಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ.
ಬಿಜೆಪಿ ಹಿಂದುಳಿದ ವರ್ಗಗಳ ಪರವಾದ ಪಕ್ಷ: ಬಿಜೆಪಿ ಬೃಹತ್ ಸಮಾವೇಶ ಹಿನ್ನೆಲೆ ಬಿಜೆಪಿ ನಾಯಕರು ಕಲಬುರಗಿ ನಗರದಲ್ಲಿ ಬೀಡುಬಿಟ್ಟಿದ್ದಾರೆ. ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ಮಾಧ್ಯಮಗೋಷ್ಟಿ ನಡೆಸಿ, ಭಾನುವಾರ ಬೆಳಗ್ಗೆ 11 ಗಂಟೆಗೆ ಒಬಿಸಿ ಸಮಾವೇಶ ಉದ್ಘಾಟನೆಗೊಳ್ಳಲಿದೆ. ಚುನಾವಣೆ ಸಮೀಪಸುತ್ತಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಬಿಸಿ ಜನ ಬಹಳಷ್ಟು ಇದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಎಸ್‌ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಎಸ್‌ಸಿ/ಎಸ್ಟಿ ಜನ ಮೀಸಲಾತಿ ಹೆಚ್ಚಳದಿಂದ ಸಂತಸಗೊಂಡಿದ್ದಾರೆ ಎಂದರು.
ಇದನ್ನೂ ಓದಿ: ಒಬಿಸಿ ಮೀಸಲಾತಿ ಅಂತಿಮಗೊಳಿಸಿಯೇ ಜಿಪಂ, ತಾಪಂ ಚುನಾವಣೆ ನಡೆಸುತ್ತೇವೆ : ಸಚಿವ ಈಶ್ವರಪ್ಪ
ನಮ್ಮದು ಬದ್ಧತೆ ಇರುವ ಸರ್ಕಾರ, ಒಬಿಸಿ ಪರ ಅನೇಕ ಯೋಜನೆ ಜಾರಿಗೆ ತಂದಿದ್ದೇವೆ. ಪಿಎಂ ಮೋದಿ ಸಂವಿಧಾನ ಬದ್ಧವಾಗಿ ಎಸ್‌ಸಿ/ಎಸ್ಟಿ ಜನಾಂಗಕ್ಕೆ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ 50 ವರ್ಷ ಆಳಿದರೂ ಸಹ ಹೆಚ್ಚಿನ ಪ್ರಮಾಣದಲ್ಲಿ ಎಸ್‌ಸಿ ಹಾಗೂ ಎಸ್ಟಿ ಸಮಾಜದವರನ್ನ ಸಚಿವರನ್ನಾಗಿ ಮಾಡಿಲ್ಲ. ಆದ್ರೆ, ಬಿಜೆಪಿ ರಾಜ್ಯ ಹಾಗೂ ಕೇಂದ್ರದಲ್ಲಿ 27 ಜನ ಒಬಿಸಿ ಸಮುದಾಯಕ್ಕೆ ಸೇರಿದವರನ್ನು ಸಚಿವರನ್ನಾಗಿ ಮಾಡಿದೆ. ಬಿಜೆಪಿ ಹಿಂದುಳಿದ ವರ್ಗಗಳ ಪರ ಇದೆ, ಒಬಿಸಿ ಸಮಾವೇಶ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ಎಸ್‌ಸಿ, ಒಬಿಸಿ, ಅಲ್ಪಸಂಖ್ಯಾತರಿಗೆ ಹಕ್ಕು ಪತ್ರ ನೀಡಿ ಎಂದ ರಾಹುಲ್ ಗಾಂಧಿ
ರಾಜ್ಯ ಸರ್ಕಾರ ಮೋದಿ ಕಂಟ್ರೋಲ್‌ನಲ್ಲಿಲ್ಲ: ರಾಜ್ಯ ಸರ್ಕಾರ ಪ್ರಧಾನಿ ಮೋದಿ ಅವರ ಕಂಟ್ರೋಲ್‌ನಲ್ಲಿದೆಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ರವಿಕುಮಾರ್, ಕಾಂಗ್ರೆಸ್ ಆರೋಪ ಅಲ್ಲಗೆಳೆದರು. ಕಾಂಗ್ರೆಸ್ ಪಕ್ಷಕ್ಕೆ ಆರೋಪ ಮಾಡುವುದೇ ಕಾಯಕವಾಗಿದೆ. ನಮ್ಮ ಪಕ್ಷದಲ್ಲಿ ಯಾರು ಯಾರ ಕೈಗೊಂಬೆಯಾಗುವುದಿಲ್ಲ, ಸ್ವತಂತ್ರವಾಗಿ ಉತ್ತಮ ಆಡಳಿತ ನೀಡುವುದೇ ನಮ್ಮ ಪಕ್ಷದ ಗುರಿ ಎಂದು ಹೇಳಿದರು.