ಕಲಬುರಗಿ: ಇಂದು ನಡೆದ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ’ಮೋದಿ ಮೋದಿ - ಖರ್ಗೆ ಖರ್ಗೆ’ ಎಂಬ ಜೈ ಘೋಷಗಳು ಬಲು ಜೋರಾಗಿಯೇ ಕೇಳಿಬಂದಿವೆ. ಕಾರ್ಯಕರ್ತರ ನಡುವೆ ಜೈಘೋಷ ಕೂಗಲು ಪೈಪೋಟಿಯೂ ನಡೆದಿದೆ.
ವಿಮಾನ ಲೋಕಾರ್ಪಣೆಗೆ ಬಂದಿದ್ದ ಸಿಎಂ ಬಿಎಸ್ ವೈ ಮುಂದೆ ಮಲ್ಲಿಕಾರ್ಜುನ ಖರ್ಗೆ ಪರ ಜಯಘೋಷ ಕೂಗಲಾಯಿತು. ಕಾಂಗ್ರೆಸ್ ಮುಖಂಡ ಎಮ್.ಎಲ್.ಸಿ ತಿಪ್ಪಣ್ಣಪ್ಪ ಕಮಕನೂರ್ ಹಿಂದೆ ಬರುತ್ತಿದ್ದ ಕಾಂಗ್ರೆಸ್ ಬೆಂಬಲಿಗರು, ಖರ್ಗೆ ಹಾಗೂ ಕಾಂಗ್ರೆಸ್ ಪರ ಜಯಘೋಷ ಕೂಗಿದರು. ಇದಕ್ಕೆ ತಲೆ ಕೆಡಿಸಿಕೊಳ್ಳದ ಬಿಎಸ್ವೈ ಹಾಗೂ ಸಚಿವರು ಮುಂದೆ ಸಾಗಿದರು. ಆದರೆ, ಇದರಿಂದ ಮುಜುಗರಕ್ಕೊಳಗಾದ ಬಿಜೆಪಿ ಸ್ಥಳೀಯ ಕಾರ್ಯಕರ್ತರು, ಬಿರುಸಿನ ಪೈಪೋಟಿ ನೀಡಿದರು. ಮೋದಿ ಮೋದಿ ಎನ್ನುತ್ತಾ ಬಿಜೆಪಿ ಪಕ್ಷದ ಪರವಾಗಿ ಜೈ ಘೋಷಗಳನ್ನು ಕೂಗಿದರು.
ಇನ್ನು ಪ್ರೋಟೋಕಾಲ್ ನೆಪದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಉದ್ದೇಶಪೂರ್ವಕವಾಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್ ಬೆಂಬಲಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಷ್ಟಾಚಾರ ಅಡ್ಡಬಂದಿದ್ದರೆ ಬಿಜೆಪಿಯ ಮಾಜಿ ಶಾಸಕರು, ಮಾಜಿ ಸಚಿವರುಗಳಿಗೆ ವೇದಿಕೆಯ ಮೊದಲನೆ ಸಾಲಿನಲ್ಲಿ ಏನು ಕೆಲಸ ಇತ್ತು ಎಂದು ಕಾಂಗ್ರೆಸ್ ಬೆಂಬಲಿಗರು ಕಿಡಿಕಾರಿದ್ದಾರೆ.
ಉದ್ಘಾಟನೆ ವೇದಿಕೆ ಮೇಲೆ ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ರಾಜ್ಯಸಭಾ ಸದಸ್ಯರು ಮೊದಲನೆಯ ಸಾಲಿನಲ್ಲಿ ಕುಳಿತಿದ್ದು ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪಕ್ಕೆ ಕಾರಣವಾಗಿದೆ.