ಕಲಬುರಗಿ: ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಎನ್ಪಿಆರ್ ಮತ್ತು ಎನ್ಆರ್ಸಿ ಒಂದೇ ನಾಣ್ಯದ ಎರಡು ಮುಖಗಳು. ಸಿಎಎ ಜಾರಿ ಮೂಲಕ ಮುಸ್ಲಿಂರ ಮೇಲೆ ಷಡ್ಯಂತ್ರ ನಡೆಸಲಾಗುತ್ತಿದೆ. ನಾವು ಜೀವಂತವಿರಬೇಕೆಂದರೆ ಸಂಘರ್ಷ ಅನಿವಾರ್ಯ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಆರ್ಎಸ್ಎಸ್ಗೆ ಹೆದರುವ ಅವಶ್ಯಕತೆಯಿಲ್ಲ ಎಂದರು.
ಬೀದರ್ ಘಟನೆಯನ್ನು ಖಂಡಿಸಿದ ಓವೈಸಿ, ಶಾಲೆಯಲ್ಲಿ ನಡೆದ ಡ್ರಾಮಾವೊಂದರಲ್ಲಿ ವಿದ್ಯಾರ್ಥಿನಿ ಚಪ್ಪಲಿಯಿಂದ ಹೊಡೆಯೋದಾಗಿ ಹೇಳಿದ್ರೆ ಅವರ ತಾಯಿಯನ್ನ ಜೈಲಿಗೆ ಹಾಕ್ತಾರೆ. ಮೋದಿ ಮತ್ತು ರಾಜ್ಯ ಬಿಜೆಪಿ ಸರ್ಕಾರ ದೇಶದ್ರೋಹದ ಆರೋಪದ ಮೇಲೆ ಈ ಸಂಬಂಧ ಪ್ರಕರಣ ದಾಖಲಿಸಿದೆ. ಆ ಬಾಲಕಿ ಮಾಡಿದ ಅಪರಾಧವಾದ್ರೂ ಏನು? ಎಂದು ಪ್ರಶ್ನಿಸಿದರು.
ಧೈರ್ಯವಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಿ. ಗೋಲಿ ಹೊಡೆಯೋದಾದ್ರೆ ಎಷ್ಟು ಜನರ ಮೇಲೆ ಹೊಡಿತಾರೆ ಹೊಡಿಯಲಿ. ನಿಮ್ಮ ಗೋಲಿಗಳು ಖಾಲಿಯಾಗುತ್ತೆ ಹೊರತು, ನಮಗೆನೂ ಆಗಲ್ಲ. ಪೌರತ್ವ ವಿರೋಧಿ ಹೋರಾಟಗಾರರ ಮೇಲೆ ಗುಂಡು ಹಾರಿಸಿದರೆ ಹೊಡೆದವನು ಅಪ್ರಾಪ್ತ ಎಂದು ಸಮರ್ಥಿಸಿಕೊಳ್ಳಲಾಗುತ್ತದೆ. ಹಾಗಿದ್ದರೆ ಚಪ್ಪಲಿಯಿಂದ ಹೊಡಯೋದಾಗಿ ಹೇಳಿದ ವಿದ್ಯಾರ್ಥಿನಿ ಎಷ್ಟು ವರ್ಷದವಳು ಎಂದು ಪ್ರಶ್ನಿಸಿದ ಓವೈಸಿ, ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಗೋಡೆ ಕಟ್ಟಲಾಗುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಓವೈಸಿ, ಮುಸ್ಲಿಂಮರನ್ನು ಹಾಳು ಮಾಡಿದ್ದೇ ಕಾಂಗ್ರೆಸ್ ಪಕ್ಷ. ತನ್ನ ಮತ ಬ್ಯಾಂಕ್ಗಾಗಿ ನಮ್ಮನ್ನು ಬಳಸಿಕೊಂಡು ಬಿಸಾಡಿದ್ದು, ಈಗ ಏನೂ ಮಾಡಲಾರದ ಅಸಹಾಯಕತೆಯಲ್ಲಿದೆ ಎಂದು ಕಿಡಿಕಾರಿದರು.