ಸೇಡಂ : ಕೊರೊನಾ ಮಹಾಮಾರಿಯನ್ನು ಜಾತಿ, ಧರ್ಮದ ಹೆಸರಲ್ಲಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತರದೇ ಚಿಕಿತ್ಸೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಾಗುವುದು ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಕಲಬುರಗಿಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಕೊರೊನಾ ಪೀಡಿತನಿಗೆ ಚಿಕಿತ್ಸೆ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರ ಸಭೆ ನಡೆಸಿದ ಅವರು, ಕೊರೊನಾ ಸೋಂಕು ಲಕ್ಷಣ ಕಂಡು ಬಂದಲ್ಲಿ ಕೂಡಲೇ ತಾಲೂಕು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕೂಡಲೇ ಅವರು ಬಂದು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ರೀತಿ ಮಾಹಿತಿ ಬಚ್ಚಿಡುವ ಪ್ರಯತ್ನ ಮಾಡಬಾರದು ಎಂದು ಸೂಚಿಸಿದರು.
ಸರ್ಕಾರದೊಂದಿಗೆ ಸ್ಪಂಧಿಸಿದರೆ ಖಾಸಗಿ ವೈದ್ಯರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುವ ಭರವಸೆ ನೀಡಿದ ಅವರು, ಆಸ್ಪತ್ರೆಗೆ ಬರುವವರಿಗೆ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಲು ಸೂಚಿಸುವಂತೆ ಕೋರಿದರು.