ಕಲಬುರಗಿ: ನಡುಗಡ್ಡೆಯಾಗಿ ಗ್ರಾಮ ಮತ್ತು ಇತರೆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 77 ಜನರನ್ನು ರಕ್ಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಮಾನವ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಚಿತ್ತಾಪೂರ ತಾಲೂಕಿನ ಮಾಲಗತ್ತಿಯಲ್ಲಿ 3, ಶಹಾಬಾದ ಪಟ್ಟಣದ ಜೆ.ಪಿ.ಕಾಲೋನಿ ಪ್ರದೇಶದ 5 ಮತ್ತು ಹಳೆ ಶಹಾಬಾದ ಪ್ರದೇಶದ 6 ಹಾಗೂ ತಾಲೂಕಿನ ಭಂಕೂರ ಗ್ರಾಮದಲ್ಲಿ ಓರ್ವರನ್ನು ರಕ್ಷಿಸಲಾಗಿದೆ. ಸೇಡಂ ತಾಲೂಕಿನಲ್ಲಿ ಸಟಪನಹಳ್ಳಿ ಗ್ರಾಮದಲ್ಲಿ 2 ಮತ್ತು ಮಳಖೇಡ್ ಗ್ರಾಮದಲ್ಲಿ 26 ಜನರನ್ನು ರಕ್ಷಣಾ ತಂಡಗಳು ಪ್ರಾಣಾಪಾಯದಿಂದ ಪಾರು ಮಾಡಿವೆ.
ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ 13, ಚಿಂಚೋಳಿ ಪಟ್ಟಣ 4 ಐನೊಳ್ಳಿಯಲ್ಲಿ 3 ಹಾಗೂ ಜಟ್ಟೂರು ಗ್ರಾಮದಲ್ಲಿ 14 ಜನರನ್ನು ರಕ್ಷಿಸಲಾಗಿದೆ.
ಕಳೆದ ಮೂರು,ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಜನ ಹೈರಾಣಾಗಿದ್ದಾರೆ. ಮಳೆಯ ಆರ್ಭಟಕ್ಕೆ ನದಿ, ಹಳ್ಳಗಳು ತುಂಬಿದ್ದು ಮನೆಗಳಿಗೂ ಮಳೆ ನೀರು ಹೊಕ್ಕಿದೆ.