ಸೇಡಂ (ಗುಲ್ಬರ್ಗಾ): ಕೊರೊನಾ ವೈರಸ್ ರುದ್ರನರ್ತನಕ್ಕೆ ಸೇಡಂ ತಾಲೂಕಿನ ಜನ ಭಯಭೀತರಾಗಿದ್ದಾರೆ. ಒಂದೇ ದಿನ 8 ಕಂದಮ್ಮಗಳು ಸೇರಿದಂತೆ 23 ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಸೋಂಕಿತರ ಸಂಖ್ಯೆ 76 ಕ್ಕೆ ಏರಿಕೆಯಾಗಿದೆ.
ಕೆಲ ದಿನಗಳ ಹಿಂದೆ ಸೂರವಾರ ಗ್ರಾಮದ 7 ವರ್ಷದ ಮಗುವಿನಲ್ಲಿ ಕಾಣಿಸಿಕೊಂಡ ಖಾಯಿಲೆ ಇದೀಗ ಮಗುವಿನ ತಾಯಿಗೂ ಹರಡಿದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂವರು ಸಿಬ್ಬಂದಿ ಒಳಗೊಂಡಂತೆ ವಿವಿಧ ಗ್ರಾಮಗಳ 23 ಜನರಿಗೆ ನಿನ್ನೆ ಒಂದೇ ದಿನ ಇಷ್ಟೊಂದು ಪ್ರಕರಣಗಳು ಕಂಡು ಬಂದಿರುವುದರಿಂದ ಗ್ರಾಮೀಣ ಭಾಗದಲ್ಲಿ ಆತಂಕ ಮನೆಮಾಡಿದೆ.
ತಾಲೂಕಿನ ಸೂರವಾರ, ಬಟಗೇರಾ, ಬಿಜನಳ್ಳಿ, ದುಗನೂರ ಮತ್ತು ಮಾಧವಾರ ಗ್ರಾಮಗಳಲ್ಲಿ ಕೊರೊನಾ ಮಹಾಮಾರಿ ಕಾಣಿಸಿಕೊಂಡಿದೆ.
ಈ ಪೈಕಿ ಓರ್ವ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, 8 ಜನ ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರು. ಇನ್ನುಳಿದವರು ಕ್ವಾರಂಟೈನ್ ಕೇಂದ್ರಗಳಿಂದ ಬಿಡುಗಡೆಯಾದವರು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ಮೇಕಿನ್ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂವರು ಸಿಬ್ಬಂದಿಗೆ ಕೊರೊನಾ ಬಾಧಿಸಿದ್ದು, ಅವರಿಗೆ ಸೋಂಕು ಹರಡಿದ್ದು ಹೇಗೆ? ಎಂಬುದರ ಕುರಿತು ಇನ್ನೂ ತಿಳಿದುಬಂದಿಲ್ಲ. ಇದರಿಂದಾಗಿ ಆಸ್ಪತ್ರೆಗೆ ಪ್ರತಿನಿತ್ಯ ಭೇಟಿ ನೀಡುವ ರೋಗಿಗಳಲ್ಲಿ ಆತಂಕ ಉಂಟಾಗಿದೆ.