ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತ ಬಾಲಕರನ್ನು ನಾಗರಾಜ್ ಮಾರುತಿ ಲಂಕೇಶ್ (11) ಮತ್ತು ಹೇಮಂತ್ ಮಾಲತೇಶ್ ಹರಿಜನ್ (12) ಎಂದು ಗುರುತಿಸಲಾಗಿದೆ.
ಕೆರೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಆಳ ತಿಳಿಯದೆ ಕೆರೆಗಿಳಿದ ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬ್ಯಾಡಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಿನ ಸುಳಿಗೆ ಸಿಲುಕಿ ಯುವಕ ಸಾವು (ಶಿರಸಿ): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುರೇಗಾರ್ ಫಾಲ್ಸ್‌ನಲ್ಲಿ ಸ್ನಾನಕ್ಕೆಂದು ಹೊಳೆಗಿಳಿದಾಗ ನೀರಿನ ಸುಳಿಗೆ ಸಿಲುಕಿ ಯುವಕ ಮೃತಪಟ್ಟ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಇನಾಮಪುರದ ಫೈನಾನ್ಸ್ ಉದ್ಯೋಗಿ ದಾನೇಶ ದೊಡ್ಮನಿ (23) ಮೃತರು. ಇವರು ತನ್ನ 6 ಮಂದಿ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಶಿರಸಿ ತಾಲೂಕಿನ ಸಾಲ್ಕಣಿ ಪಂಚಾಯತ್ ವ್ಯಾಪ್ತಿಯ ಮುರೇಗಾರ್ ಫಾಲ್ಸ್‌ಗೆ ತೆರಳಿದ್ದರು. ಸ್ನಾನಕ್ಕೆಂದು ನೀರಿಗಿಳಿದಾಗ ಸುಳಿಗೆ ಸಿಲುಕಿ ಮುಳುಗಿದ್ದಾರೆ.
ಘಟನೆ ಶನಿವಾರ ಮಧ್ಯಾಹ್ನ ವೇಳೆ ನಡೆದಿದೆ. ಸಂಜೆ ಶಿರಸಿಯ ಗೋಪಾಲ ಗೌಡ ಮತ್ತವರ ತಂಡ ಮೃತ ಯುವಕನ ದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪಿಐ ಸೀತಾರಾಮ.ಪಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಳೆದ ಒಂದು ವಾರದ ಹಿಂದಷ್ಟೇ ಶಿರಸಿ ತಾಲೂಕಿನಲ್ಲಿ ಒಂದೇ ಕುಟುಂಬದ ಐವರು ನೀರು ಪಾಲಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಯುವಕನ ಬದುಕು ದುರಂತ ಅಂತ್ಯ ಕಂಡಿದೆ. ಇದರಿಂದಾಗಿ ಮುರೇಗಾರ್ ಜಲಪಾತದಲ್ಲಿ ಜನರು ಈಜಾಡುವುದನ್ನು ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: ಶಿರಸಿ: ಸ್ನಾನಕ್ಕೆಂದು ನೀರಿಗಿಳಿದ ಯುವಕ ಸುಳಿಗೆ ಸಿಲುಕಿ ಸಾವು