ಹಾವೇರಿ: ಪಠ್ಯ ವಾಪಸಾತಿ ಕುರಿತಂತೆ ನಾನು ಇನ್ನೂ ಅಧ್ಯಯನ ಮಾಡಿಲ್ಲ. ಈ ಕುರಿತಂತೆ ಸಾಕಷ್ಟು ಪರ ವಿರೋಧ ಇವೆ. ಆದರೆ ಒಂದಂತೂ ಸತ್ಯ ಈ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಭಾಗವಹಿಸಬಾರದು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ಶಿಕ್ಷಣ ಇಲಾಖೆಯ ಡಿಎಸ್ಈಆರ್‌ಟಿಗೆ ಬಿಡಬೇಕು ಎಂದು ಒತ್ತಾಯಿಸಿದರು.
ಯಾವುದೇ ರಾಜಕೀಯ ಪಕ್ಷವಿರಲಿ ಡಿಎಸ್ಈಆರ್‌ಟಿ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಮಕ್ಕಳಿಗೆ ಅದನ್ನು ಕಲಿಸಿ ಇದನ್ನು ಕಲಿಸಿ ಎನ್ನುವ ಬದಲು ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯೋಗವಾಗುವಂತಹ ಪಠ್ಯ ರಚಿಸುವ ನಿಲುವು ವ್ಯಕ್ತಪಡಿಸಬೇಕು ಎಂದು ಹೊರಟ್ಟಿ ಅಭಿಪ್ರಾಯಪಟ್ಟರು. ಡಿಎಸ್ಇಆರ್ಟಿ ಮೇಲೆ ನಮಗೆ ಯಾರಿಗೂ ಅಧಿಕಾರವಿಲ್ಲ. ಅದು ರಚಿಸಿದ ಪಠ್ಯವನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಬಹುದೇ ಹೊರತು ಪೂರ್ತಿ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಹೊರಟ್ಟಿ ತಿಳಿಸಿದರು.
ಇವತ್ತಿನ ಶಿಕ್ಷಣ ಪದ್ದತಿ ಬಗ್ಗೆ ಮಾತನಾಡಿದ ಹೊರಟ್ಟಿ ಇಂಜಿನಿಯರ್ ಮತ್ತು ವೈದ್ಯರು ಬಿಟ್ಟರೆ ಇಂದಿನ ಶಿಕ್ಷಣ ಪದ್ದತಿಯಿಂದ ಯಾರೂ ಉದ್ಧಾರವಾಗುವುದಿಲ್ಲ. ಇವತ್ತಿನ ಶಿಕ್ಷಣ ಪದ್ದತಿಯಲ್ಲಿ ಬದುಕಿನ ಶಿಕ್ಷಣದ ಪದ್ದತಿಯಿಲ್ಲ ಎಂದು ಹೇಳಿದರು.
ಪಶ್ಚಿಮ ಶಿಕ್ಷಕರ ವಿಧಾನಪರಿಷತ್ ಚುನಾವಣೆ ನಡೆಯುವ ನಾಲ್ಕು ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡಿದ್ದು, ಶಿಕ್ಷಕರು ನನ್ನ ಪರವಾಗಿದ್ದಾರೆ. ಪ್ರತಿಬಾರಿ ಚುನಾವಣೆ ನಡೆದಾಗ ಬಿಜೆಪಿ ಮತ್ತು ನನ್ನ ನಡುವೆ ಫೈಟ್ ಆಗುತ್ತಿತ್ತು. ಆದರೆ ಈಗ ನಾನು ಬಿಜೆಪಿಗೆ ಬಂದಿದ್ದರಿಂದ ಗೆಲುವು ಇನ್ನಷ್ಟು ಹಗುರವಾಗಿದೆ ಹಾಗೂ ಸರಳವಾಗಿದೆ. ನನಗೆ ಮೂರು ಪಕ್ಷದವರು ಸಪೋರ್ಟ್ ಮಾಡುತ್ತಾರೆ. ನಾನು ಸಚಿವನಾಗಿದ್ದಾಗ ಜಾತಿ ಪಕ್ಷ ಯಾವುದು ಎಂದು ನೋಡಿ ಕೆಲಸ ಮಾಡಿಲ್ಲ ಎಂದು ಬಸವರಾಜ್ ಹೊರಟ್ಟಿ ಇದೇ ವೇಳೆ ಹೇಳಿದರು.
ಮತದಾರರು ಬದಲಾವಣೆ ಬಯಸಿದ್ದಾರೆ. ಹೊರಟ್ಟಿ ಶಿಕ್ಷಕರನ್ನು ಹೆದರಿಸಿ ಮತ ಹಾಕಿಸುತ್ತಾರೆ ಎಂದು ಟೀಕಿಸುತ್ತಿರುವ ಪ್ರತಿಪಕ್ಷದವರ ಆರೋಪ ಕೊಳಕುಮಟ್ಟದ್ದು. ಅಯೋಗ್ಯರ ಮಾತುಗಳಿಗೆ ನಾನು ಹೆಚ್ಚು ಬೆಲೆ ಕೊಡುವುದಿಲ್ಲ. ಕೆಲ ಜಿಲ್ಲೆಯ ಡಿಡಿಪಿಐಗಳು ಖಾಸಗಿ ಶಾಲೆಯ ಶಿಕ್ಷಕರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಬರುವುದಿಲ್ಲ ಎಂದು ತಿಳಿಸಿರುವುದು ಅವರ ಮೂರ್ಖತನದ ಪರಮಾವಧಿ. ಈ ಕುರಿತಂತೆ ಆದೇಶ ಹೊರಡಿಸಿರುವ ಅಧಿಕಾರಿಗಳಿಗೆ ತಲೆ ಇಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ನಾನು ಶಾಲೆಗೆ ಹೋಗುವಾಗ ಪಠ್ಯದಲ್ಲಿ ಶಿವ, ಗಣೇಶನ ಚಿತ್ರವೂ ಇತ್ತು: ಸಚಿವ ಕೋಟಾ ಶ್ರೀನಿವಾಸ್