ಹಾವೇರಿ : ಚೆಂಬೆಳಕಿನ ಕವಿ ನಾಡೋಜ ಡಾ.ಚೆನ್ನವೀರ ಕಣವಿ ನಿಧನಕ್ಕೆ ಹಾವೇರಿ ಸಾಹಿತಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಸಾಹಿತಿ ಸತೀಶ್ ಕುಲಕರ್ಣಿ ಅವರು, ಕಣವಿ ಅವರು ಬಹಳ ಹಿರಿಯ ಕವಿಗಳು. ನನ್ನಂತಹ ಎಷ್ಟೋ ಕವಿಗಳಿಗೆ ಮಾರ್ಗದರ್ಶಕರು ಮತ್ತು ಪ್ರೇರಕರು ಆಗಿದ್ದರು. ಕವಿ ಕಣವಿ ಅವರ ನಿಧನ ತೀವ್ರ ದುಃಖ ತಂದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಬಹಳ ಸಜ್ಜನಿಕೆಯ ಕವಿಯಾಗಿದ್ದು, ಒಬ್ಬ ಕವಿ ಸಮಾಜದಲ್ಲಿ ಯಾವ ರೀತಿ ಇರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಕಣವಿಯವರು ಇದ್ದರು. ಹಿರಿಯ, ಕಿರಿಯ ಮತ್ತು ಸಮಾನವಯಸ್ಕ ಕವಿಗಳ ಜೊತೆ ಹೇಗೆ ಇರಬೇಕು ಎಂಬುವುದಕ್ಕೆ ಕಣವಿ ಮಾದರಿಯಾಗಿದ್ದರು ಎಂದು ಸತೀಶ್ ಕುಲಕರ್ಣಿ ಅಭಿಪ್ರಾಯಪಟ್ಟರು.
ಕಣವಿಯವರ ಮನೆಗೆ ಯಾವುದೇ ಆಮಂತ್ರಣವಿರಲಿ ಕೃತಿಗಳನ್ನು ಕಳಿಸಿದರೇ ಅವರಿಂದ ಪತ್ರದಲ್ಲಿ ಉತ್ತರ ಬರುತ್ತಿತ್ತು ಎಂದು ಕುಲಕರ್ಣಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಹಾವೇರಿ ಜೊತೆ ಕಣವಿಯವರಿಗೆ ಸಾಕಷ್ಟು ನಂಟು ಇತ್ತು. ತಮ್ಮ ಸಾಹಿತ್ಯದ ಕೃತಿಗಳ ಬಿಡುಗಡೆ ಸೇರಿದಂತೆ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳಿಗೆ ತಮ್ಮ ಪತ್ನಿ ಶಾಂತಾದೇವಿ ಜೊತೆ ಚೆನ್ನವೀರ ಕಣವಿಯವರು ಬಂದಿದ್ದರು ಎಂದು ಕುಲಕರ್ಣಿ ತಿಳಿಸಿದರು.
ಇದನ್ನೂ ಓದಿ: ಚೆಂಬೆಳಕಿನ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಇನ್ನಿಲ್ಲ
ದೇವರು ಅವರ ಆತ್ಮಕ್ಕೆ ಶಾಂತಿನೀಡಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಾಹಿತಿ ಕುಲಕರ್ಣಿ ಸಂತಾಪ ವ್ಯಕ್ತಪಡಿಸಿದ್ದಾರೆ. ಚೆಂಬೆಳಕಿನ ಕವಿ ಎಂದೇ ಪ್ರಸಿದ್ಧರಾಗಿದ್ದ ಡಾ.ಚೆನ್ನವೀರ ಕಣವಿ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ ಎಂದು ಲೇಖಕಿ ಪುಷ್ಪ ಶೆಲವಡಿಮಠ ಕಂಬನಿ ಮೀಡಿದರು.
ಚೆನ್ನವೀರ ಕಣವಿ ನವೋದಯದ ಕಾಲಘಟ್ಟದ ಪ್ರಮುಖ ಕವಿಯಾಗಿದ್ದರು. ತುಂಬಾ ಭಾವನಾತ್ಮಕವಾಗಿದ್ದ ಕಣವಿಯವರು ಹೆಚ್ಚು ಭಾವನಾತ್ಮಕ ಗೀತೆಗಳನ್ನ ಬರೆದಿದ್ದಾರೆ. ಡಾ.ಚೆನ್ನವೀರ ಕಣವಿ ತಮ್ಮ ಸಾಹಿತ್ಯದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಅಜರಾಮರವಾಗಿದ್ದಾರೆ ಎಂದು ಲೇಖಕಿ ಪುಷ್ಪಾ ಶೆಲವಡಿಮಠ ಸಂತಾಪ ಸೂಚಿಸಿದ್ದಾರೆ.