ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಹಾವೇರಿ ವಿಶೇಷ ಸತ್ರ ನ್ಯಾಯಾಲಯವು 10 ವರ್ಷ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ 60 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಅಪರಾಧಿ ಅಸ್ಫಾಕ ಚಮನಸಾಬ್ ಕೋಟಿ ಎಂಬಾತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಗೆ ಆಮಿಷ ತೋರಿಸಿ ಪುಸಲಾಯಿಸಿ ದುಷ್ಕೃತ್ಯ ಎಸಗಿದ್ದ. ಬಾಲಕಿ ಗರ್ಭಿಣಿಯಾಗಿದ್ದಳು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿತ್ತು. ಹಾನಗಲ್ ಸಿಪಿಐ ಎಸ್.ಆರ್.ಗಣಾಚಾರಿ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಐಪಿಸಿಯ ವಿವಿಧ ಕಲಂಗಳು ಮತ್ತು ಪೋಕ್ಸೋ ಕಾಯ್ದೆ 2012ರಡಿ ಆಪಾದನೆ ರುಜುವಾತಾದ ಹಿನ್ನೆಲೆಯಲ್ಲಿ ಅಸ್ಫಾಕ ಚಮನಸಾಬ್ ಕೋಟಿಗೆ ದಂಡಸಮೇತ ಶಿಕ್ಷೆ ವಿಧಿಸಿ ನ್ಯಾಯಾಧೀಶ ನಿಂಗನಗೌಡ ಪಾಟೀಲ್ ಆದೇಶಿಸಿದರು. ದಂಡದ ಹಣದಲ್ಲಿ 1 ಲಕ್ಷ ರೂಪಾಯಿಯನ್ನು ಸಂತ್ರಸ್ತ ಬಾಲಕಿಗೆ ಮತ್ತು ನೊಂದವರ ಪರಿಹಾರ ಯೋಜನೆಯಡಿ ಇರುವ ಪರಿಹಾರ ನಿಧಿಗೆ ನಾಲ್ಕು ಲಕ್ಷ ರೂಪಾಯಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ್ ಶಂಕರಗೌಡ ಪಾಟೀಲ್ ವಾದ ಮಂಡಿಸಿದ್ದರು.
20 ವರ್ಷಗಳ ಕಾರಾಗೃಹ ಶಿಕ್ಷೆ: ಶಿವಮೊಗ್ಗದಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಸತ್ರ ನ್ಯಾಯಾಲಯ 27 ವರ್ಷದ ಯುವಕನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.50 ಲಕ್ಷ ರೂಪಾಯಿ ದಂಡ ವಿಧಿಸಿ ಇತ್ತೀಚೆಗೆ ಆದೇಶಿಸಿತ್ತು. ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 9 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. 2022ರಲ್ಲಿ ಶಿವಮೊಗ್ಗದ ನಿವಾಸಿ, ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಸಂತ್ರಸ್ತೆಯು (ಬಾಲಕಿ) ತಾಯಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪೋಕ್ಸೋ ಕೋರ್ಟ್ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದರು.
ಇದನ್ನೂ ಓದಿ: ಅತ್ಯಾಚಾರ ಆರೋಪಿ ಬಿಡುಗಡೆಗೆ ನಕಲಿ ಜಾಮೀನು ಆದೇಶ ನೀಡಿದ ಪೋಕ್ಸೋ ಕೋರ್ಟ್ ಕ್ಲರ್ಕ್!