ಹಾವೇರಿ : ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳು ದಿನನಿತ್ಯ ಪರದಾಡುವಂತಾಗಿದೆ. ಗ್ರಾಮದಿಂದ ನಗರಕ್ಕೆ ಬಂದು ಕಾಲೇಜ್‌ಗೆ ತೆರಳಲು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಒಂದು ಕಡೆ ಸರಿಯಾದ ವೇಳೆಗೆ ಬಸ್‌ಗಳಿಲ್ಲಾ. ಮತ್ತೊಂದು ಕಡೆ ಕಾಲೇಜ್ ಮಾರ್ಗವಾಗಿ ತೆರಳುವ ಬಹುತೇಕ ಬಸ್‌ಗಳು ಕಾಲೇಜಿನ ಬಳಿ ನಿಲ್ಲುವುದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.
ಹಾವೇರಿ ಜಿಲ್ಲೆಯಾಗಿ ಎರಡು ದಶಕಗಳೇ ಕಳೆದಿವೆ. ಜಿಲ್ಲೆಯಲ್ಲಿರುವ ಸರ್ಕಾರಿ ಕಾಲೇಜುಗಳು ನಗರದಿಂದ 10 ಕಿಮೀ ದೂರದಲ್ಲಿವೆ. ಅವು ಒಂದೊಂದು ದಿಕ್ಕಿನಲ್ಲಿ ಒಂದೊಂದು ಕಾಲೇಜುಗಳಿವೆ. ಪ್ರಥಮ ದರ್ಜೆ ಕಾಲೇಜ್ ಹೊಸಪೇಟಿ ರಸ್ತೆಯಲ್ಲಿದ್ದರೆ, ಎಂಜಿನಿಯರಿಂಗ್ ಕಾಲೇಜ್ ದೇವಗಿರಿಯಲ್ಲಿದೆ. ಇನ್ನು ಪ್ರಧಾನಮಂತ್ರಿ ಕೌಶಲ್ಯಾಭಿವೃದ್ದಿ ಕೇಂದ್ರ ಹುಬ್ಬಳ್ಳಿ ರಸ್ತೆಯಲ್ಲಿದೆ. ಹೀಗಾಗಿ ಸುತ್ತಮುತ್ತ ಹಳ್ಳಿಗಳಿಂದ ಆಗಮಿಸುವ ವಿದ್ಯಾರ್ಥಿಗಳು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ನಂತರ ತಮ್ಮ ಕಾಲೇಜ್‌ಗಳಿಗೆ ತೆರಳಬೇಕು. ಆದರೆ ಇಲ್ಲಿಂದ ಈ ಕಾಲೇಜುಳಿಗೆ ತೆರಳಲು ಸಮರ್ಪಕ ಬಸ್‌ಗಳಿಲ್ಲಾ ಎನ್ನುತ್ತಾರೆ ವಿದ್ಯಾರ್ಥಿಗಳು.
ಕೆಲ ಬಸ್‌ಗಳು ಕಾಲೇಜ್ ಮುಂದೆ ಹೋದರು ಸಹ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲ್ಲಾ. ಬಸ್ ಪಾಸ್ಗೆ ನಮ್ಮ ಬಸ್ಲ್ಲಿ ಅನುಮತಿ ಇಲ್ಲಾ ಎಂದು ನಿರ್ವಾಹಕರು ವಿದ್ಯಾರ್ಥಿಗಳನ್ನ ಕೆಳಗೆ ಇಳಿಸುತ್ತಾರೆ. ಇನ್ನು ಕೆಲ ಜಾಣ ನಿರ್ವಾಹಕರು ನಿಮ್ಮ ಕಾಲೇಜಿಗೆ ನಮ್ಮ ಬಸ್ ನಿಲುಗಡೆ ಇಲ್ಲಾ ಎಂಬ ಸಬೂಬು ಹೇಳುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ಕೆಲವೊಮ್ಮ ಸ್ವಂತ ಹಣ ನೀಡಿ ಸಂಚರಿಸುವ ಅನಿವಾರ್ಯತೆ ಇದೆ.
ಒಟ್ಟಿನಲ್ಲಿ ಕಾಲೇಜಿಗೆ ತೆರಳಲು ಪ್ರತಿನಿತ್ಯ ವಿದ್ಯಾರ್ಥಿಗಳು ಪಡುವ ಪರಿಪಾಟಲು ಹೇಳತೀರದ್ದಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಇತ್ತ ಗಮನಹರಿಸಬೇಕಿದೆ.