ರಾಣೆಬೆನ್ನೂರು (ಹಾವೇರಿ): 2020 ನೇ ಸಾಲಿನಲ್ಲಿ ಮುಂಗಾರು ಹಂಗಾಮು ಇನ್ನೇನು ಶುರುವಾಗಲಿದ್ದು, ರೈತರು ಕೃಷಿ ಕೆಲಸಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆ ಕೃಷಿ ಇಲಾಖೆಯ ವತಿಯಿಂದ ನಗರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಯಿತು.
ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಶಾಸಕ ಅರುಣ್ಕುಮಾರ್ ಪೂಜಾರ, ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಮುಂಗಾರು ಆರಂಭವಾದ್ದರಿಂದ ತಾಲೂಕಿನ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈಗಾಗಲೇ ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ದಾಸ್ತಾನು ಮಾಡಿದೆ. ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಸದ್ಯ ಕೃಷಿಯಲ್ಲಿ ನಿರತರಾದ ರೈತರಿಗೆ ಯಾವುದೇ ಬಿತ್ತನೆ ಬೀಜ ಕೊರತೆ ಎದುರಾಗದಂತೆ ಕೃಷಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ರಾಣೆ ಬೆನ್ನೂರ ತಾಲೂಕಿನ ಹರನಗಿರಿ ಗ್ರಾಮದಲ್ಲಿ ತಾಲೂಕು ಪಂಚಾಯತ್ ವತಿಯಿಂದ ರೈತರ ಭೂಮಿಯಲ್ಲಿ ಮಳೆ ನೀರಿನ ಇಂಗು ಗುಂಡಿಗಳನ್ನು ನರೇಗಾ ಕಾಮಗಾರಿ ವತಿಯಿಂದ ಮಾಡಲಾಗುತ್ತಿದೆ. ಲಾಕಡೌನ್ ಕಾರಣ ಸ್ಥಳೀಯ ಜನರಿಗೆ ಉದ್ಯೋಗ ಕೊಡುವ ಸಲುವಾಗಿ ನರೇಗಾ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು. ಬಿತ್ತನೆ ಬೀಜ ವಿತರಣೆ ಸಮಯದಲ್ಲಿ ಅಧಿಕಾರಿಗಳಾದ ಹೆಚ್.ಬಿ. ಗೌಡಪ್ಪಳವರ, ಶ್ಯಾಮಸುಂದರ ಕಾಂಬಳೆ, ಬಸವರಾಜ ಶಿಡೇನೂರ ಹಾಗೂ ಇನ್ನಿತರರು ಹಾಜರಿದ್ದರು.