ಹಾವೇರಿ: ಬಸ್ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸವಣೂರು ತಾಲೂಕಿನ ಕಡಕೋಳ, ಕೃಷ್ಣಾಪುರ ಗ್ರಾಮಗಳ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಬಸ್ ನಿಲ್ದಾಣಕ್ಕೆ ಬರುವ ಮತ್ತು ನಿಲ್ದಾಣಗಳಿಂದ ಹೋಗುವ ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಮಧ್ಯೆ ಸ್ಥಳಕ್ಕಾಗಮಿಸಿದ ಪೊಲೀಸರನ್ನು ಸಹ ವಿದ್ಯಾರ್ಥಿಗಳು ತರಾಟೆಗೆ ತಗೆದುಕೊಂಡರು. ಸಾರಿಗೆ ಸಚಿವರು ಸಾರ್ವಜನಿಕ ಬಸ್‌ಗಳಲ್ಲಿ ಓಡಾಡಲಿ, ನಮ್ಮಂತಹ ವಿದ್ಯಾರ್ಥಿಗಳ ಸಮಸ್ಯೆ ಆಲಿಸಬೇಕು. ಅದನ್ನು ಬಿಟ್ಟು ಎಸಿ ಕಾರಿನಲ್ಲಿ ಸಂಚರಿಸಿದರೆ ಸಮಸ್ಯೆಗಳು ಗೊತ್ತಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.