ಹಾವೇರಿ: ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಕೋವಿಡ್ ಸುರಕ್ಷತಾ ಯಾವುದೇ ಸಾಮಗ್ರಿಗಳನ್ನು ನೀಡದ ಕಾರಣ ಜಿಲ್ಲಾಧಿಕಾರಿ ವಿರುದ್ಧ ಕೃಷಿ ಸಚಿವ ಬಿ.ಸಿ. ಪಾಟೀಲ್ ಗರಂ ಆಗಿದ್ದಾರೆ.
ಜಿಲ್ಲೆಯ ಹಿರೇಕೆರೂರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಮಾಸ್ಕ್, ಸ್ಯಾನಿಟೈಸರ್ ಸೇರಿ ಏನನ್ನೂ ತಮಗೆ ನೀಡಿಲ್ಲ ಎಂದು ಆಶಾ ಕಾರ್ಯಕರ್ತೆಯರು ಸಚಿವರೆದುರು ಕಣ್ಣೀರು ಹಾಕಿದ್ದಾರೆ. ಅದನ್ನು ಕಂಡ ಸಚಿವ ಬಿ.ಸಿ. ಪಾಟೀಲ್ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರಿಗೆ ಕರೆ ಮಾಡಿ ದೂರವಾಣಿಯಲ್ಲೇ ತರಾಟೆಗೆ ತೆಗೆದುಕೊಂಡರು.
ಒಬ್ಬರಿಗೂ ಒಂದು ಮಾಸ್ಕ್ ಕೊಟ್ಟಿಲ್ಲ, ಸ್ಯಾನಿಟೈಸರ್ ಇಲ್ಲ, ಏನ್ ಮಾಡ್ತಿದ್ದೀರಿ. ಜಿಲ್ಲೆಯಲ್ಲಿ ಏನ್ ವ್ಯವಸ್ಥೆ ನಡೀತಾ ಇದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಕತೆಗಳನ್ನ ಹೇಳಬೇಡಿ, ನಾನು ಇದನ್ನ ಗಂಭೀರವಾಗಿ ಪರಿಗಣಿಸಿದ್ದೇನೆ. ಟಿಎಚ್ಒ ಕೇಳಿದರೆ ಕೊಟ್ಟಿಲ್ಲ ಅಂತಿದ್ದಾರೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಫಂಡ್ನಲ್ಲಿ ಮಾಸ್ಕ್ ಕೊಳ್ಳೋಕೆ ಏನಾಗಿದೆ ಎಂದು ಕೇಳಿದ್ರು. ವಿತರಣೆ ಆಗಿದೆ ಅಂತಾ ಫೋನ್ನಲ್ಲಿ ಡಿಸಿ ಸಬೂಬು ನೀಡುತ್ತಿದ್ದಂತೆ, ಆಶಾ ಕಾರ್ಯಕರ್ತರ ಜೊತೆ ವಿಡಿಯೋ ಕಾಲ್ನಲ್ಲಿ ಮಾತಾಡ್ತಿರಾ, ಅವರನ್ನೆ ಕೇಳ್ತೀರಾ ಅಂತ ಸಚಿವರು ಮತ್ತಷ್ಟು ಗರಂ ಆದರು.
ಮಾಸ್ಕ್, ಸ್ಯಾನಿಟೈಸರ್ ಇಲ್ಲದೇ ಆಶಾ ಕಾರ್ಯಕರ್ತೆಯರು ಹಳ್ಳಿಗಳಲ್ಲಿ ಹೇಗೆ ಕೆಲಸ ಮಾಡಬೇಕು. ನಿಮ್ಮ ಮತ್ತು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಜನರು ಸಾಯ್ತಿದ್ದಾರೆ ಅಂತಾ ಡಿಸಿ ವಿರುದ್ಧ ಕೆಂಡಾಮಂಡಲವಾದರು. ಇದು ಸಾಮಾನ್ಯ ವಿಚಾರವಲ್ಲ, ತುಂಬಾ ಗಂಭೀರವಾದ ವಿಚಾರ ಅಂತಾ ಹೇಳಿ ಬಿ.ಸಿ. ಪಾಟೀಲ್ ಕರೆ ಕಟ್ ಮಾಡಿದ್ರು.