ಹಾವೇರಿ: ನವೆಂಬರ್ 1 ರಾಜ್ಯದಾದ್ಯಂತ ಸಡಗರ-ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ಇದರ ಮಧ್ಯೆ ಈ ಪುಟ್ಟ ಗ್ರಾಮವೊಂದರಲ್ಲಿ ಕಳೆದ ಆರು ವರ್ಷಗಳಿಂದ ಪ್ರತಿದಿನ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದ್ದು, ಎಲ್ಲೆಲ್ಲೂ ಕನ್ನಡ ರಿಂಗೇಣಿಸುತ್ತಿದೆ.
ಎಲ್ಲೆಲ್ಲೂ ಕನ್ನಡದ ಡಿಂಡಮ

ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು,ಎಲ್ಲೆಲ್ಲೊ ಕನ್ನಡ ರಾರಾಜಿಸುತ್ತದೆ. ಪ್ರತಿಯೊಂದು ಓಣಿಗೆ ಕನ್ನಡ ಸಾಹಿತಿಗಳು ಹೆಸರು ನಾಮಕರಣ ಮಾಡಲಾಗಿದ್ದು, ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರಿಡಲಾಗಿದೆ.

ಹಾವೇರಿ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಪುಟ್ಟಗ್ರಾಮ ಡೊಳ್ಳೇಶ್ವರ. ಈ ಗ್ರಾಮ ಇದೀಗ ಕನ್ನಡ ಪ್ರೇಮದಿಂದ ಗಮನ ಸೆಳೆಯುತ್ತಿದೆ. ಕಳೆದ ಆರು ವರ್ಷಗಳಿಂದ ಇಲ್ಲಿ ಕನ್ನಡ ರಾಜ್ಯೋತ್ಸವವನ್ನ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಅಲ್ಲದೆ ಗ್ರಾಮವನ್ನ ಸಂಪೂರ್ಣ ಕನ್ನಡಮಯಗೊಳಿಸಲಾಗಿದೆ. ಪ್ರತಿವರ್ಷ ವಿಶಿಷ್ಟವಾಗಿ ಕನ್ನಡರಾಜ್ಯೋತ್ಸವ ಆಚರಿಸುವ ಈ ಗ್ರಾಮದಲ್ಲಿ ನಾಡಹಬ್ಬ ಮನೆ ಮನೆಯ ಹಬ್ಬವಾಗಿ ಮಾರ್ಪಟ್ಟಿದೆ.
ಪ್ರತಿ ರಸ್ತೆಗಳಿಗೂ ಸಾಹಿತಿಗಳ ಹೆಸರು

ಗ್ರಾಮದ ಪ್ರಮುಖ ರಸ್ತೆಗಳಿಗೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು ನಾಮಕರಣ ಮಾಡಲಾಗಿದೆ. ಆರು ವರ್ಷಗಳಿಂದ ಈ ಗ್ರಾಮದಲ್ಲಿ ನಾಡಧ್ವಜಾರೋಹಣವನ್ನ ಸ್ವಾಮೀಜಿಗಳಿಂದ ನೇರವೇರಿಸಲಾಗುತ್ತದೆ. ಮನೆ ಮನೆಗಳು ತಳಿರು-ತೋರಣಗಳಿಂದ ಸಿಂಗಾರಗೊಳ್ಳುತ್ತವೆ. ಓಣಿ ಓಣಿಗಳಲ್ಲಿ ರಂಗೋಲಿಗಳ ಚಿತ್ತಾರ ಕಂಡುಬರುತ್ತದೆ.

ದೂರದ ಊರುಗಳಿಂದ ಬರುತ್ತಾರೆ ಸಂಬಂಧಿಕರು

ಕನ್ನಡ ರಾಜ್ಯೋತ್ಸವ ಇಲ್ಲಿ ಅಕ್ಷರಶಃ ಮನೆ ಮನೆಯ ಹಬ್ಬವಾಗಿದೆ. ಪ್ರತಿಯೊಂದು ಮನೆಯವರು ನಾಡಹಬ್ಬವನ್ನ ಮನೆ ಮನೆಯ ಹಬ್ಬವಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ರಾಜ್ಯೋತ್ಸವ ಹತ್ತಿರವಾಗ್ತಿದ್ದಂತೆ ಗ್ರಾಮಸ್ಥರು ದೂರದ ಊರುಗಳಲ್ಲಿರುವ ಸಂಬಂಧಿಕರನ್ನ ಇಲ್ಲಿಗೆ ಕರೆತರುತ್ತಾರೆ. ಮಕ್ಕಳಿಗೆ ಕನ್ನಡ ನಾಡು-ನುಡಿ ಕುರಿತಂತೆ ಪ್ರಬಂಧ ಸ್ಪರ್ಧೆ ಏರ್ಪಡಿಸುತ್ತಾರೆ. ನವಂಬರ್ ತಿಂಗಳಿಗೆ ಮಾತ್ರ ರಾಜ್ಯೋತ್ಸವ ಮೀಸಲಾಗುತ್ತಿರುವ ಈ ದಿನಗಳಲ್ಲಿ ಗ್ರಾಮಸ್ಥರ ಈ ನುಡಿ-ಪ್ರೇಮ ಉಳಿದ ಗ್ರಾಮಗಳಿಗೆ ಮಾದರಿಯಾಗಿದೆ.