ರಾಣೆಬೆನ್ನೂರು: ಕಳೆದ ಒಂದು ತಿಂಗಳಿಂದ ಸುರಿದ ಭಾರೀ ಮಳೆಯಿಂದ ಮನೆ ಸಂಪೂರ್ಣವಾಗಿ ನೆಲಕಚ್ಚಿದ್ದರೂ ಅಧಿಕಾರಿಗಳು ಮಾತ್ರ ಪರಿಹಾರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ರಾಣೆಬೆನ್ನೂರು ತಾಲೂಕಿನ ಯಕಲಾಸಪುರ ಗ್ರಾಮದ ರೇಣುಕಾ ಅಳಲಗೇರಿ ಎಂಬುವರ ಮನೆ ಸಂಪೂರ್ಣ ಕುಸಿದಿದೆ. ಪರಿಹಾರ ನೀಡುವಂತೆ ಅಧಿಕಾರಿಗಳ ಹತ್ತಿರ ಎಲ್ಲಾ ದಾಖಲೆ ತಗೆದುಕೊಂಡು ಹೋದರೂ ಇವರಿಗೆ ಕ್ಯಾರೆ ಎನ್ನುತ್ತಿಲ್ಲವಂತೆ. ಇದರಿಂದ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಈಗ ಜಿಲ್ಲಾಧಿಕಾರಿ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಅಲ್ಲದೆ ಅಧಿಕಾರಿಗಳು ಕುಸಿತಗೊಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇದು ವಾಸವಿಲ್ಲದೆ ಮನೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಗ್ರಾಮದ ಮುಖಂಡರೊಬ್ಬರು ಈ ಹಿಂದೆ ವಾಸವಿದ್ದರು. ಆದರೆ ಮನೆ ಕುಸಿತಗೊಂಡ ತಕ್ಷಣ ಬೇರೆ ಮನೆಯಲ್ಲಿ ಕುಟುಂಬ ವಾಸ ಇದೆ ಎನ್ನುತ್ತಾರೆ.
ಕಳೆದ ಬಾರಿ ಮಳೆಯಿಂದ ಹಾನಿಯಾದ ಮನೆಗಳಿಗೆ ಸರ್ಕಾರ 5 ಲಕ್ಷದವರಗೆ ಪರಿಹಾರ ನೀಡಿದೆ. ಇದರಂತೆ ಯಕಲಾಸಪುರ ಗ್ರಾಮದಲ್ಲಿ ವಾಸವಿಲ್ಲದ ಮನೆಗಳನ್ನು ತೋರಿಸುವ ಮೂಲಕ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಗ್ರಾಮದ ಮುಖಂಡರು ಆರೋಪಿಸುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಆಶ್ರಯ ಮನೆಗಳನ್ನು ತಗೆದುಕೊಂಡರೂ ಸಹ ಹಿಂದಿನ ಬಾರಿ ಬಿದ್ದ ಹಳೇ ಮನೆಗಳನ್ನು ತೋರಿಸಿ ಪರಿಹಾರ ತಗೆದುಕೊಂಡಿದ್ದಾರೆ. ಇದನ್ನು ಸೂಕ್ತ ತನಿಖೆ ಮಾಡಿ ನಮಗೂ ನ್ಯಾಯ ಕೊಡಿಸಬೇಕು ಎಂದು ಅಧಿಕಾರಿಗಳಿಗೆ ಸಂತ್ರಸ್ತರು ಮನವಿ ಮಾಡಿದ್ದಾರೆ.