ಹಾವೇರಿ : ರಮೇಶ ಜಾರಕಿಹೊಳಿ ಪ್ರಕರಣ ಆದಮೇಲೆ ಬಹಳಷ್ಟು ಊಹಾಪೋಹಗಳು, ಸಂಶಯಾಸ್ಪದ ಷಡ್ಯಂತ್ರಗಳು, ಪೂರ್ವಭಾವಿ ಹನಿಟ್ರ್ಯಾಪ್ ಸೇರಿದಂತೆ ಬಹಳಷ್ಟು ವಿಚಾರಗಳು ಕೇಳಿ ಬಂದಿವೆ. ಹೀಗಾಗಿ ಕೆಲವು ಸಚಿವರು, ಶಾಸಕರಾಗಲಿ ಅವರ ತೇಜೋವಧೆ ಆಗೋ ಸಾಧ್ಯತೆಗಳು ಹೆಚ್ಚಿವೆ, ಹೀಗಾಗಿ ಆರು ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತೇಜೋವಧೆ, ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವಂತಹದ್ದು ಮತ್ತು ರಾಜ್ಯದಲ್ಲಿ ರಾಜಕೀಯವಾಗಿ ಅಸ್ಥಿರತೆಯನ್ನ ಮಾಡಬೇಕು ಅನ್ನೋ ಹಿನ್ನೆಲೆ ಕಂಡು ಕೆಲವರು ನ್ಯಾಯಾಂಗದ ರಕ್ಷಣೆ ಕೋರಿದ್ದಾರೆ. ಅಲ್ಲದೇ ರಮೇಶ ಜಾರಕಿಹೊಳಿ ಮೇಲೆ ದೂರು ಬಂದಿದೆ. ಅದರ ಆಧಾರದ ಮೇಲೆ ತನಿಖೆ ನಡಿತಿದೆ. ದೂರು ಕೊಟ್ಟವರು ಏನು ಮಾಹಿತಿ ಕೊಡಬೇಕಾಗಿತ್ತು, ಆ ಮಹಿಳೆ ಬಂದು ಹೇಳಿಕೆ ಕೊಡಬೇಕಾಗಿತ್ತು. ಇದುವರೆಗೂ ಕೊಟ್ಟಿಲ್ಲ. ಇಂಥಾ ಕೇಸ್ನಲ್ಲಿ ಮುಂದೆ ಬಂದು ದೂರು ಕೊಡದಿರೋದು, ಹೇಳಿಕೆ ಕೊಡದಿರದ ಕಾರಣ ಷಡ್ಯಂತ್ರ ಸೇರಿದಂತೆ ಎಲ್ಲ ಸಂಶಯಗಳಿಗೆ ಕಾರಣವಾಗಿದೆ. ಹೀಗಾಗಿ ಕೆಲವರು ಕಾನೂನಿನ ರಕ್ಷಣೆ ತೆಗೆದುಕೊಳ್ಳುತ್ತಿದ್ದಾರೆ. ಪೊಲೀಸರು ಸಹ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದರು.
ಇನ್ನು ಮಾಜಿ ಸಿಎಂ ಎಚ್ ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಈ ವಿಷಯದಲ್ಲಿ ಹಲವಾರು ಜನರು ಹಲವಾರು ಹೇಳಿಕೆ ಕೊಟ್ಟಿದ್ದಾರೆ. ಕೆಲವರು ಹತ್ತೊಂಬತ್ತು ಜನ ಇದ್ದಾರೆ, ಇನ್ನೂ ಕೆಲವರು ಡೀಲ್ ಆಗಿದೆ ಎನ್ನುತ್ತಿದ್ದಾರೆ. ಎಲ್ಲ ವಿಚಾರಗಳನ್ನ ಗಮನಿಸಿದ್ದೇವೆ. ಎಲ್ಲೆಲ್ಲಿ ತನಿಖೆ ಮಾಡಬೇಕೋ ಅಲ್ಲಿ ಎಲ್ಲ ತನಿಖೆ ಮಾಡುತ್ತೇವೆ ಎಂದರು.
ಓದಿ : ಸಾರ್ವಜನಿಕ ಬದುಕಿನಲ್ಲಿದ್ದ ಜನಪ್ರತಿನಿಧಿಗಳು ಎಚ್ಚರಿಕೆಯಿಂದ ಇರಬೇಕು: ಬಸವರಾಜ ಹೊರಟ್ಟಿ
ದಿನೇಶ ಕಲ್ಲಹಳ್ಳಿ ಬಿಜೆಪಿ ಜೊತೆ ಗುರ್ತಿಸಿಕೊಂಡಿರೋ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲರೂ ಯಾವ್ಯಾವ ಪಕ್ಷದಲ್ಲಿ ಇದ್ದಾರೆ ಯಾರಿಗೆ ಗೊತ್ತು. ಏನು ದೂರು ಕೊಟ್ಟಿದ್ದಾರೆ ಅದರ ಬಗ್ಗೆ ಎರಡು ಬಾರಿ ಕರೆದಿದ್ದೇವೆ. ಎರಡು ಬಾರಿ ಕರೆದಾಗಲೂ ಅವರು ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದು ಮಾಧ್ಯಮಗಳ ಮುಂದೆಯೆ ಇದೆ. ಅದರ ಆಧಾರದ ಮೇಲೆ ತನಿಖೆ ಮಾಡುತ್ತೇವೆ. ಅವರು ಯಾರ ಜೊತೆ ಗುರುತಿಸಿಕೊಂಡಿದ್ದಾರೆ ಎಂಬುದು ಅದು ನಮಗೆ ಗೊತ್ತಿಲ್ಲ ಮತ್ತು ಅದು ಈಗ ಮುಖ್ಯವೂ ಅಲ್ಲ ಎಂದರು.