ಹಾವೇರಿ: ತನ್ನನ್ನು ಮನೆಯಿಂದ ಹೊರಹಾಕಿದ್ದ ಸ್ವಂತ ಮಕ್ಕಳ ದೌರ್ಜನ್ಯದ ವಿರುದ್ಧ ವೃದ್ಧೆಯೊಬ್ಬರು ಕಾನೂನು ಹೋರಾಟ ಮಾಡಿ ಜಯಗಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪೂರ ಗ್ರಾಮದ 76 ವರ್ಷದ ಪ್ರೇಮವ್ವ ಹವಳಣ್ಣನವರ್ ತನ್ನ ಮಕ್ಕಳ ವಿರುದ್ಧ ಜಯಗಳಿಸಿದ ವೃದ್ಧೆ. ಪ್ರೇಮವ್ವಳ ಪತಿ ಶ್ರೀಕಾಂತ ತೀರಿ ಹೋಗಿ ಆರು ವರ್ಷಗಳು ಕಳೆದಿವೆ. ತಂದೆ ಸಾವನ್ನಪ್ಪುತ್ತಿದ್ದಂತೆ ಗಂಡು ಮತ್ತು ಹೆಣ್ಣುಮಕ್ಕಳು ತಾಯಿಗೆ ಆಸ್ತಿಯಲ್ಲಿ ಯಾವುದೇ ಪಾಲು ಕೊಡಲಿಲ್ಲ. ಅಲ್ಲದೇ ಪ್ರೇಮವ್ವಳಿಗೆ ಆಶ್ರಯವನ್ನೂ ನೀಡದೆ ಮನೆಯಿಂದ ಹೊರಹಾಕಿದ್ದಾರೆ.
ಸ್ವಂತ ಗಂಡು ಮಕ್ಕಳು ಮತ್ತು ಹೆಣ್ಣು ಮಗಳು ಮತ್ತು ಆಕೆಯ ಪತಿ ಸೇರಿ ವೃದ್ಧೆ ಪ್ರೇಮವ್ವಳನ್ನು ಮನೆಯಿಂದ ಹೊರಹಾಕಿದ್ದಾರೆ. ಒಂದು ವರ್ಷದ ಹಿಂದೆ ಹೊರಹಾಕಲ್ಪಟ್ಟಿದ್ದ ವೃದ್ಧೆ ಬೇರೆಯವರ ಸಹಾಯದಿಂದ ಹಾವೇರಿಯಲ್ಲಿರುವ ಧ್ವನಿ ಸ್ವಧಾರಾಗೃಹದಲ್ಲಿ ಆಶ್ರಯ ಪಡೆದಿದ್ದರು.
ಸಹಕಾರ ನೀಡಿದ ಪರಿಮಳಾ ಜೈನ್:
ಧ್ವನಿ ಸ್ವಧಾರಾಗೃಹದ ಮುಖ್ಯಸ್ಥೆ ಪರಿಮಳಾ ಜೈನ್ ವೃದ್ಧೆಗೆ ಆಶ್ರಯ ನೀಡಿದ್ದಲ್ಲದೆ, ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಅದರಂತೆ ಕಳೆದ ಕೆಲ ದಿನಗಳ ಹಿಂದೆ ಹಿರಿಯರ ನ್ಯಾಯಾಲಯದ ಮೂಲಕ ಇಬ್ಬರು ಮಕ್ಕಳಾದ ಸಂತೋಷ ಮತ್ತು ಧನಿಕುಮಾರ್‌ಗೆ ನೋಟಿಸ್ ಕಳಿಸಿದ್ದಾರೆ.
ವೃದ್ಧೆ ಪ್ರೇಮವ್ವಳ ಜೀವನಕ್ಕೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ನೀಡುವಂತೆ ತಿಳಿಸಿದ್ದಾರೆ. ಆದರೆ, ಸಂತೋಷ ಮತ್ತು ಧನಿಕುಮಾರ್ ನೋಟಿಸ್ಗೆ ಕಿಂಚಿತ್ ಕಾಳಜಿಯನ್ನೂ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಹಿರಿಯರ ನ್ಯಾಯಾಲಯದ ಮೆಟ್ಟಿಲೇರಿದ ಪರಿಮಳಾ ಜೈನ್, ವೃದ್ಧೆಯ ಜೀವನಕ್ಕೆ ಮೂರು ಎಕರೆ 32 ಗುಂಟೆ ಜಮೀನು ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಕ್ಕಳ ಹೆಸರಿನಲ್ಲಿದ್ದ ಆರು ಎಕರೆ 32 ಗುಂಟೆ ಜಮೀನಿನಲ್ಲಿ ಮೂರು ಎಕರೆ 32 ಗುಂಟೆ ಜಮೀನನ್ನು ವೃದ್ಧೆ ಪ್ರೇಮವ್ವಳ ಹೆಸರಿಗೆ ಕೊಡಮಾಡಿದೆ.
ಕೋರ್ಟ್ ಹೇಳಿದ್ದೇನು?:
ಜೀವಂತವಾಗಿರುವವರೆಗೆ ಈ ಆಸ್ತಿ ಅನುಭವಿಸು, ನೀನು ನಿಧನವಾದ ನಂತರ ಆಸ್ತಿ ನಿನ್ನ ಮಕ್ಕಳಿಗೆ ಹೋಗುತ್ತೆ ಎಂದು ನ್ಯಾಯಾಲಯ ತಿಳಿಸಿತು. ಒಂದು ವೇಳೆ ಆಸ್ತಿಗಾಗಿ ಮಕ್ಕಳು ಜಗಳ ಮಾಡಿದರೆ ಅವರ ಪಾಲಿಗೆ ಹೋಗುವುದನ್ನು ತಡೆಹಿಡಿಯಬಹುದು ಎಂದೂ ಸಹ ಕೋರ್ಟ್ ತಿಳಿಸಿದೆ.
ಇದರಿಂದ ಸಂತಸಗೊಂಡ ಪ್ರೇಮವ್ವ ಇದೀಗ ತನ್ನ ಮನೆಗೆ ಹೋಗಲು ಉತ್ಸುಕರಾಗಿದ್ದಾರೆ. ಸ್ವಧಾರಾ ಸಂಸ್ಥೆಯ ಮುಖ್ಯಸ್ಥೆ ಪರಿಮಳಾ ಜೈನ್, ಹಾನಗಲ್ ತಹಶೀಲ್ದಾರ್ ಯರ್ರಿಸ್ವಾಮಿ ಮತ್ತು ಉಪವಿಭಾಗಾಧಿಕಾರಿ ಅನ್ನಪೂರ್ಣ ಅವರ ಈ ಸಹಾಯಕ್ಕೆ ವೃದ್ಧೆ ಕೃತಜ್ಞರಾಗಿದ್ದಾರೆ.
'ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ನನ್ನನ್ನು ಮನೆಯಿಂದ ಹೊರಹಾಕಿದರು. ಆದರೆ, ಈ ಅಧಿಕಾರಿಗಳು ತಮ್ಮ ಸ್ವಂತ ತಾಯಿಯ ರೀತಿ ನನಗೆ ನ್ಯಾಯ ದೊರಕಿಸಿದರು' ಎನ್ನುತ್ತಾರೆ ಪ್ರೇಮವ್ವ.