ರಾಣೆಬೆನ್ನೂರ: ಸರ್ಕಾರ ನೀಡುತ್ತಿರುವ ಬೆಳೆಪರಿಹಾರ ಹಾಗೂ ನೆರೆಪರಿಹಾರದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಹಸೀಲ್ದಾರ ಬಸನಗೌಡ ಕೋಟುರು ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರ ಬೆಳೆ ಹಾಗೂ ಮನೆಗಳು ಹಾನಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಅಧಿಕಾರಿಗಳು ಲಂಚ ನೀಡಿದವರಿಗೆ ಮಾತ್ರ ಪರಿಹಾರವನ್ನು ಬೇಗ ಬಿಡುಗಡೆ ಮಾಡುತ್ತಿದ್ದಾರೆ. ಬಡವರಿಗೆ ಮತ್ತು ನಿಜವಾದ ನಿರಾಶ್ರಿತರಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಪಾದನೆ ಮಾಡಿದರು.
ಕೆಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯೂ ಸಹ ಸರಿಯಾಗಿ ರೈತರಿಗೆ ಸಿಗುತ್ತಿಲ್ಲ. ಕೆಲವು ರೈತರಿಗೆ 2 ಕಂತು ಜಮಾವಾಗಿದ್ದು, ಇನ್ನೂ ಕೆಲ ರೈತರಿಗೆ ಹಣ ಜಮಾವಾಗಿಲ್ಲ ಎಂದು ತಮ್ಮ ಅಳಲು ತೊಡಿಕೊಂಡರು.
ರೈತ ಸಂಘದ ತಾಲೂಕ ಅಧ್ಯಕ್ಷ ಕರಬಸಪ್ಪ ಅಗಸಿಬಾಗಿಲ, ಸುರೇಶ ದೂಳೆಹೊಳೆ, ಜಗದೀಶಗೌಡ ಪಾಟೀಲ, ಶಂಕ್ರಪ್ಪ ಮೆಣಸಿನಹಾಳ, ಸಿದ್ದಪ್ಪ ನಿಟ್ಟೂರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.