ಬೆಂಗಳೂರು: ಯಾವುದೇ ಕಾರಣಕ್ಕೂ ಉದಾಸೀನ ಮಾಡದೆ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಸಕಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಹಾವೇರಿ ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಹಾವೇರಿ ಜಿಲ್ಲಾಡಳಿತ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಿನ್ನೆ ಸಭೆ ನಡೆಸಿದರು. ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಸಚಿವ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್ ಇಲ್ಲದಿರುವುದು, ಟೆಸ್ಟಿಂಗ್ ಆಗದಿರುವುದು, ರೆಮ್‌ಡಿಸಿವಿರ್ ಔಷಧಿ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಬಸವರಾಜ ಬೊಮ್ಮಾಯಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: 1,500 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೆ ಕೇಂದ್ರಕ್ಕೆ ಸಿಎಂ ಮನವಿ ಮಾಡಿದ್ದಾರೆ; ಸಚಿವ ಸುಧಾಕರ್
ಮುಂದಿನ ಮೂರು ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸುತ್ತೇನೆ. ಅಷ್ಟರೊಳಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕೋವಿಡ್ ಎರಡನೆಯ ಅಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹೀಗಾಗಿ ಈಗಿನಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಸಂಗ್ರಹ ಮಾಡಿಟ್ಟುಕೊಳ್ಳಿ. ರೆಮ್‌ಡಿಸಿವಿರ್ ಔಷಧವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಡಿ. ಲಸಿಕೆ ಪ್ರಮಾಣವನ್ನು ಹೆಚ್ಚು ಮಾಡಿ. ಆಸ್ಪತ್ರೆಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳಿ. ಜಿಂಕ್ ಮತ್ತು ಇತರೆ ಔಷಧಿ ಸಂಗ್ರಹಿಸಿಡಿ. ಐಸಿಯು ಬೆಡ್‌ಗಳನ್ನು ಸಜ್ಜು ಮಾಡಿ ಇಟ್ಟುಕೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಅವರು ಚಾಟಿ ಬೀಸಿದರು.
ಕೋವಿಡ್‌ಅನ್ನು ಗಂಭೀರವಾಗಿ ತೆಗೆದುಕೊಳ್ಳಿ. ಪ್ರತಿದಿನ 3000ಕ್ಕೂ ಅಧಿಕ ಟೆಸ್ಟಿಂಗ್ ಮಾಡಲೇಬೇಕು. ಟೆಸ್ಟಿಂಗ್ ರಿಪೋರ್ಟನ್ನು ಬೇಗ ನೀಡಬೇಕು. ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಗೆ ಅರ್ಧಗಂಟೆಯಲ್ಲಿ ಚಿಕಿತ್ಸೆ ನೀಡಬೇಕು. ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕ ಇರುವ ಕನಿಷ್ಠ 30 ಜನರ ಟೆಸ್ಟಿಂಗ್ ಮಾಡಬೇಕು. ಹೋಮ್ ಐಸೋಲೇಶನ್ ಆಗಿರುವ ರೋಗಿಯ ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಜಾತ್ರೆ, ಮದುವೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಜನಸಂದಣಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಕಟ್ಟು ನಿಟ್ಟಾಗಿ ಆದೇಶಿಸಿದರು. ಜಾತ್ರೆಗಳ ರದ್ದತಿ ಕುರಿತು ದೇವಸ್ಥಾನದ ಸಮಿತಿಗಳೊಂದಿಗೆ ಮಾತನಾಡಿಸಬೇಕು. ಯಾವುದೇ ಸಂಘರ್ಷವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು.ಕೋವಿಡ್ ಸಂದರ್ಭದಲ್ಲಿ ಆಗುತ್ತಿರುವ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಬೇಕು. ಕಳೆದ ಮೂರು ತಿಂಗಳ ಅವಧಿಯಲ್ಲಿ ನಡೆದಿರುವ ಕಳ್ಳತನ ಮತ್ತು ಪತ್ತೆಯಾಗಿರುವ ಪ್ರಕರಣಗಳ ಕುರಿತು ವರದಿ ನೀಡುವಂತೆ ಸಚಿವರು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.