ಹಾನಗಲ್(ಹಾವೇರಿ) : ಸರಿಯಾದ ಸಮಯಕ್ಕೆ ಮಳೆಯಾಗದ ಪರಿಣಾಮ ತಾಲೂಕಿನ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸನ್ನಿವೇಶ ಬಂದೊದಗಿದೆ.
ತಾಲೂಕಿನಲ್ಲಿ ಮಳೆಯಾಗದೆ 15 ದಿನಗಳಾಗುತ್ತಿವೆ. ಮೊದಲ ಮಳೆಯನ್ನೇ ನಂಬಿ ಹತ್ತಿ, ಗೋವಿನ ಜೋಳ, ಸೋಯಾಬಿನ್, ಭತ್ತ ಬಿತ್ತಿದ್ದ ರೈತರು ಮಳೆ ಬಾರದೆ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸಾಲ ಮಾಡಿ ತಂದು ಬಿತ್ತಿದ ಬೀಜಗಳು ಭೂಮಿಯಲ್ಲಿ ಹುದುಗಿ ಹೋಗಿವೆ. ಅಲ್ಪಸ್ವಲ್ಪ ಬೆಳೆದ ಬೆಳೆ ನೀರಿಲ್ಲದೆ ಬಾಡುತ್ತಿದೆ. ಸರಿಯಾಗಿ ಮಳೆ ಬಾರದಿದ್ದರೆ ನಾವು ಸಾಲದ ಸುಳಿಗೆ ಸಿಲುಕಿ ನರಳುವುದು ಖಚಿತ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.