ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೋರಟಿರುವ ಕೃಷಿ ಕಾಯ್ದೆಗಳ ವಿರುದ್ಧ ಹಾವೇರಿಯಲ್ಲಿ ರೈತರ ಮಹಾಪಂಚಾಯತ್ ನಡೆಯಿತು.
ಓದಿ: 'ಹಸಿವಿನ ವ್ಯಾಪಾರ ನಡೆಯಬಾರದು'.. ಕೇಂದ್ರದ ವಿರುದ್ಧ ಟಿಕಾಯತ್ ವಾಗ್ದಾಳಿ
ಪಂಚಾಯತ್‌ನಲ್ಲಿ ಪಾಲ್ಗೊಂಡು ರಾಷ್ಟ್ರೀಯ ರೈತ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಕೇಂದ್ರ ಸರ್ಕಾರ ದೇಶದ ಭೂಮಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟಕ್ಕೆ ಹೊರಟಿದೆ ಎಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಕುರಬೂರು ಶಾಂತಕುಮಾರ್, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಕಿಚ್ಚು ಇದೀಗ ದಕ್ಷಿಣ ಭಾರತದಲ್ಲಿ ಸಹ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರೈತ ನಾಯಕರು ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೋರಾಟ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಅಂಗವಾಗಿ ಹಾವೇರಿಯಲ್ಲಿ ಭಾನುವಾರ ರೈತ ಪಂಚಾಯತ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ರಾಷ್ಟ್ರೀಯ ರೈತ ಮುಖಂಡ ಯುದ್ಧವೀರ್ ಸಿಂಗ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಮೂರು ಕಾನೂನುಗಳು ಜಾರಿಯಾದರೆ ರೈತರು ನಾಶ ಆಗ್ತಾರೆ. ರೈತರು ನಾಶವಾದರೆ ಕೂಲಿ ಕಾರ್ಮಿಕರು ನಾಶವಾಗ್ತಾರೆ. ಇದರ ಜೊತೆಗೆ ಅನೇಕ ಸಣ್ಣ ವರ್ಗದ ಜನರು ನಾಶವಾಗುತ್ತಾರೆ. ದೇಶದಲ್ಲಿ ದುಡಿಯುವ ಮತ್ತು ಲೂಟಿಕೋರರ ವರ್ಗ ಎರಡೇ ಇದೆ. ಈಗ ಈ ಎರಡೂ ವರ್ಗಗಳ ನಡುವೆ ಸಂಘರ್ಷ ನಡೆದಿದೆ. ಕೇಂದ್ರದ ಈ ಸರ್ಕಾರ ಇಡೀ ದೇಶವನ್ನೇ ಮಾರಾಟ ಮಾಡಲು ಹೊರಟಿದೆ. ಸರ್ಕಾರ ವಿಕಾಸ, ನಿರುದ್ಯೋಗದ ಬಗ್ಗೆ ಮಾತನಾಡಬೇಕಿತ್ತು. ಆದರೆ ಧರ್ಮದ ಅಫೀಮಿನ ಬಗ್ಗೆ ಮಾತನಾಡ್ತಿದ್ದಾರೆ. ರೈತರ ರಾಮ ಅವರ ಕಾಯಕ, ಅವರ ಮನೆ ಮತ್ತು ಮನಸ್ಸಿನಲ್ಲಿದ್ದಾನೆ. ದೇಶದಾದ್ಯಂತ ಆಂದೋಲನ ಮಾಡಬೇಕಿದೆ. ದೆಹಲಿಯಂತೆ ಬೆಂಗಳೂರು ಸುತ್ತುವರೆದು ಎಲ್ಲರೂ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್, ದೆಹಲಿಯಲ್ಲಿ ನಡಿತಿರೋ ಹೋರಾಟ ಎಷ್ಟು ಕಾಲ ಮುಂದುವರೆಸಬೇಕು ಎಂಬುದು ಗೊತ್ತಿಲ್ಲ. ಸರ್ಕಾರ ರೈತರ ಜೊತೆಗೆ ಮಾತನಾಡ್ತಿಲ್ಲ. ಹೆಸರಿಗೆ ಮಾತ್ರ ಒಂದು ಪಕ್ಷದ ಸರ್ಕಾರ ಇದೆ. ವಾಸ್ತವವಾಗಿ ಈ ಸರ್ಕಾರ ಬಂಡವಾಳದಾರರ ಕೈಯಲ್ಲಿ ಸಿಲುಕಿದೆ. ಕಿಸಾನ್ ಕ್ರಾಂತಿ ಗೇಟ್ನಲ್ಲಿ ನಾವು ಕುಳಿತಿರೋ ಜಾಗದಲ್ಲಿ ಶಸ್ತ್ರಾಸ್ತ್ರಗಳನ್ನ ತಯಾರು ಮಾಡೋ ಕಂಪನಿ ಇದೆ. ಸರ್ಕಾರದ ಅಧೀನದಲ್ಲಿರೋ ಆ ಕಂಪನಿಯನ್ನ ಮಾರಲು ಹೊರಟಿದೆ. ಇದರ ವಿರುದ್ಧ ಹೋರಾಟ ಮಾಡಿ ಕಂಪನಿ ರಕ್ಷಣೆ ಮಾಡೋ ಕೆಲಸ ನಾವು ಮಾಡ್ತಿದ್ದೇವೆ.
ಭಾರತದ ಕೃಷಿ ಕ್ಷೇತ್ರದಲ್ಲಿ ಅನೇಕ ಕಂಪನಿಗಳು ನುಗ್ತಿವೆ. ಈ ಮೂರು ಕಾನೂನಿನ ತಿರುಳು ಕೂಡ ಅದೇ ಆಗಿದೆ. ಈ ಮೂರು ಕಾನೂನುಗಳನ್ನು ನಾವು ತಡೆದು ನಿಲ್ಲಿಸಬೇಕಿದೆ. ನಾವೆಲ್ಲರೂ ನಮ್ಮ ನಮ್ಮಲ್ಲಿರೋ ಟ್ರ್ಯಾಕ್ಟರ್ಗಳನ್ನ ಅಸ್ತ್ರಗಳನ್ನಾಗಿ ಬಳಸಬೇಕು. ಟ್ರ್ಯಾಕ್ಟರ್ಗಳನ್ನ ನಾವು ಈಗ ಹೊರಗೆ ತರಬೇಕಾಗಿದೆ. ಟ್ರ್ಯಾಕ್ಟರ್ ಪ್ರತಿಭಟನೆ ಸಮಯದಲ್ಲಿ ಮಲಗೋಕೆ, ಬ್ಯಾರಿಕೇಡ್ಗಳನ್ನ ಮುರಿಯೋಕೂ ಆಗುತ್ತೆ. ನಾವೆಲ್ಲರೂ ಈ ಕೆಲಸವನ್ನ ದೆಹಲಿಯಲ್ಲಿ ಮಾಡಿದರೆ, ನೀವು ಈ ಕೆಲಸವನ್ನ ಬೆಂಗಳೂರಲ್ಲಿ ಮಾಡಬೇಕು.
ಪ್ರಧಾನಿ ಹೇಳ್ತಿದ್ದಾರೆ, ನಮ್ಮ ದೇಶದಲ್ಲಿರೋದು ಮುಕ್ತ ಮಾರುಕಟ್ಟೆ ಅಂತಾ. ನಮಗೆ ಮುಕ್ತ ಮಾರುಕಟ್ಟೆ ಇದೆ ಅನ್ನೋದಾದರೆ ನಾವು ಡಿಸಿ, ತಹಶೀಲ್ದಾರ ಕಚೇರಿಯಲ್ಲಿ ಮಾರಾಟ ಮಾಡೋ ಕೆಲಸ ಮಾಡಬೇಕಿದೆ. ನೀವೇ ಹೇಳಿದಂತೆ ನಾವು ಮುಕ್ತ ಮಾರುಕಟ್ಟೆಗೆ ತಂದಿದ್ದೇವೆ, ಖರೀದಿಸಿ ಅಂತಾ ಹೇಳಬೇಕಿದೆ. ಈ ಆಂದೋಲನದಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಳ್ಳಬೇಕಿದೆ. ಮುಂದೊಂದು ದಿನ ವಿವಿಧ ಕಂಪನಿಗಳು ಬಂದು ನಮ್ಮ ಭೂಮಿಗೆ ಕೈ ಹಾಕುತ್ತವೆ. ನಮಗೆ ಮುಂದೆ ತುಂಡು ಭೂಮಿಯೂ ಉಳಿಯೋದಿಲ್ಲ. ನಮ್ಮ ಪೂರ್ವಜರು ಬಿಟ್ಟು ಹೋಗಿರೋ ಭೂಮಿಯ ಉಳಿವಿಗಾಗಿ ನಾವು ಹೋರಾಟ ಮಾಡಬೇಕಿದೆ.
2021ನೇ ವರ್ಷ ಆಂದೋಲನ ಮತ್ತು ಚಳುವಳಿಯ ವರ್ಷ. ಈ ವರ್ಷ ಆಂದೋಲನ ಮಾಡಬೇಕಿದೆ. ನಮ್ಮ ನಮ್ಮ ಬದುಕಿನ ಉಳಿವಿಗಾಗಿ ಆಂದೋಲನ ಮಾಡಬೇಕಿದೆ. ಯಾವುದೋ ಸರ್ಕಾರ ತರಲು ನಾವು ಆಂದೋಲನ ಮಾಡಬೇಕಿಲ್ಲ. ನಮ್ಮ ಉಳಿವಿಗಾಗಿ ಆಂದೋಲನ ಮಾಡಬೇಕಿದೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಂದೋಲನದಲ್ಲಿ ಭಾಗವಹಿಸಬೇಕಿದೆ ಎಂದು ಕರೆ ನೀಡಿದರು.