ಹಾವೇರಿ: ನೇತಾಜಿ ನಗರದಿಂದ ರಾಷ್ಟ್ರೀಯ ಹೆದ್ದಾರಿ 4ರ ವರೆಗಿನ ರಸ್ತೆಯಲ್ಲಿ ಮುಳ್ಳುಕಂಟಿಗಳು ಬೆಳೆದು ನಿಂತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈತರೇ ಸ್ವಯಂ ಹಣ ಹಾಕಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ.
ಇಲ್ಲಿನ ರಸ್ತೆ ದುರಸ್ತಿ ಕುರಿತಂತೆ ರೈತರು ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ರೈತರು ತಾವೇ ಸ್ವಂತ ಹಣ ಹಾಕಿ, ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ.
ಸುಮಾರು 10 ಕ್ಕಿಂತ ಅಧಿಕ ರೈತರು ತಲಾ 10 ಸಾವಿರ ರೂ. ಹಾಕಿ ರಸ್ತೆ ನಿರ್ಮಿಸುತ್ತಿದ್ದಾರೆ. ಕಾಮಗಾರಿಗಾಗಿ ಎರಡು ಜೆಸಿಬಿ, ಎರಡು ಟಿಪ್ಪರ್ ಬಾಡಿಗೆ ಪಡೆದಿರುವ ಅನ್ನದಾತರು ಈಗಾಗಲೇ 500 ಮೀಟರ್ ರಸ್ತೆ ನಿರ್ಮಿಸಿದ್ದಾರೆ.
ಮಳೆಗಾಲದಲ್ಲಿ ಈ ಭಾಗದಲ್ಲಿ ಓಡಾಡಲು ಕಷ್ಟವಾಗುತ್ತಿತ್ತು. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಯಾರೂ ಸ್ಪಂದಿಸದ ಹಿನ್ನೆಲೆ ನಾವೇ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಇದರಿಂದಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡುತ್ತೇವೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.