ಹಾವೇರಿ : ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಹಾವೇರಿ ಜಿಲ್ಲೆಯ ಎರಡು ಭಾಗಗಳಲ್ಲಿ ರೈತರು ಹೆದ್ದಾರಿ ತಡೆದು ಪ್ರತಿಭಟಿಸಿದರು.
ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ಹೆದ್ದಾರಿ ತಡೆದ ರೈತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.
12 ಗಂಟೆಯಿಂದ 1:30ರವರೆಗೆ ಹೆದ್ದಾರಿ ತಡೆದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ವೇಳೆ ಕಾರಿನಲ್ಲಿ ತೆರಳುತ್ತಿದ್ದ ವೈದ್ಯನೊಬ್ಬ ತಮ್ಮನ್ನ ಬಿಡುವಂತೆ ಕೇಳಿಕೊಂಡ. ಆಗ ರೈತ ಮುಖಂಡ ಕೈ ಮುಗಿಯುತ್ತೇನೆ.
ನಮಗೆ ಸಹಕಾರ ಕೊಡಿ ಅಂತಾ ಕೇಳಿಕೊಂಡ ಘಟನೆಯೂ ನಡೆಯಿತು. ಒಂದೂವರೆ ಗಂಟೆ ನಂತರ ಪೊಲೀಸರು ಹೆದ್ದಾರಿ ತಡೆ ನಡೆಸುತ್ತಿದ್ದ ಐವತ್ತಕ್ಕೂ ಅಧಿಕ ರೈತರನ್ನ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಮತ್ತೊಂದೆಡೆ ರಾಣೆಬೆನ್ನೂರು ತಾಲೂಕಿನ ಮಾಕನೂರು ಕ್ರಾಸ್ ಬಳಿ ಹೆದ್ದಾರಿ ತಡೆದ ರೈತರು, ರಸ್ತೆಯಲ್ಲೇ ಭಜನೆ ಮಾಡಿ, ಹೋಮ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ರೈತ ವಿರೋಧಿ ನೀತಿಗಳನ್ನ ಅನುಸರಿಸುವವರಿಗೆ ಒಳ್ಳೆಯ ಬುದ್ಧಿ ಕೊಡಲಿ ಅಂತಾ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.