ಹಾನಗಲ್: ಭೂ ಸುಧಾರಣಾ ಕಾಯ್ದೆ ಜಾರಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸರ್ಕಾರಗಳು ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ಮೂಲಕ ಉಳ್ಳವರ ಹಿತಾಸಕ್ತಿ ಕಾಪಾಡಲು ಮುಂದಾಗುತ್ತಿವೆ. ಸರ್ಕಾರಗಳಿಗೆ ರೈತರ ಏಳಿಗೆಗಿಂತ ಉದ್ಯಮಿದಾರರ ಕಾಳಜಿ ಹೆಚ್ಚಾಗಿದೆ. ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ನಾವು ಯಾವುದೇ ಕಾರಣಕ್ಕೂ ಇಂತಹ ಕಾನೂನುಗಳನ್ನ ಜಾರಿಗೆ ತರಲು ಬಿಡುವುದಿಲ್ಲ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ್ ಎಚ್ಚರಿಸಿದರು.
ಈಗಾಗಲೇ ನಾವು ಈ ಕಾಯ್ದೆಗಳ ವಿರುದ್ಧ ಧ್ವನಿ ಎತ್ತಿ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಇಂತಹ ಕಾಯ್ದೆಗಳನ್ನು ರಚಿಸುವುದು ಬಿಟ್ಟು ರೈತರಿಗೆ ಅನುಕೂಲವಾಗುವ ಕಾನೂನುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಸರ್ಕಾರ ಈ ಕೂಡಲೇ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿಯನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ರೈತರು ತಕ್ಕ ಉತ್ತರವನ್ನು ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.