ಹಾವೇರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕವೇ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ವಿನಃ ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ ಎಂದು ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಭಾರಿ ಮಳೆಯಿಂದ ಅತಿವೃಷ್ಟಿಯಾಗಿತ್ತು. ಈ ವರ್ಷವೂ ಕೆಲವಡೆ ಆಗಿದೆ. ಇದರ ನಡುವೆ ಕೊರೊನಾ ಎಂಬ ಹೆಮ್ಮಾರಿ ರಾಜ್ಯದ ಜನರ ಜೀವ ಹಿಂಡುತ್ತಿದೆ. ಆದರೆ, ರಾಜ್ಯ ಸರ್ಕಾರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ. ಬಿಜೆಪಿಯು ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ ವಿನಃ ಯಶಸ್ಸು ಕಂಡಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹಾಗೂ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಎರಡೂ ಸರ್ಕಾರದ ಸಾಧನೆಗಳನ್ನು ತಾಳೆಮಾಡಿ ನೋಡಿ ಎಂದು ಹೇಳೀದರು.
ಪ್ರವಾಹವಿದ್ದಾಗ ವೈಮಾನಿಕ ಸಮೀಕ್ಷೆ ಮಾಡಿದರೆ ಉತ್ತಮ. ಪ್ರವಾಹ ಇಳಿಮುಖವಾದ ಮೇಲೆ ವೈಮಾನಿಕ ಸಮೀಕ್ಷೆ ನಡೆಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ ಕೋನರೆಡ್ಡಿ, ಸರ್ಕಾರ ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.