ಹಾವೇರಿ: ಎತ್ತು, ಎಮ್ಮೆ ಮಾರಾಟವಾಗುವುದನ್ನು ನೋಡಿದ್ದೀರಿ. ಆದರೆ ರಾಜ್ಯಲ್ಲಿ ಶಾಸಕರೇ ಮಾರಾಟವಾಗಿದ್ದಾರೆ. ನಿಮಗೆ ಅವಮಾನ ಮಾಡಿರುವ ಬಿ.ಸಿ.ಪಾಟೀಲ್ಗೆ ಈ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿ.ಸಿ.ಪಾಟೀಲ್ ಸಚಿವನಾಗುವ ಕನಸು ನನಸಾಗುವುದಿಲ್ಲ. ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವುದಿಲ್ಲ. ಬಿ.ಸಿ.ಪಾಟೀಲ್ ಕೌರವನಿದ್ದಂತೆ, ನಮ್ಮ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ್ ಧರ್ಮರಾಯ. ಈ ಯುದ್ಧದಲ್ಲಿ ಗೆಲ್ಲುವುದು ಪಾಂಡವರು. ಬಿ.ಸಿ.ಪಾಟೀಲ್ ಉಂಡು ಹೋದ ಕೊಂಡು ಹೋದ. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಂಗಳಾರತಿ ಮಾಡಿದೆ. ಮಹಾರಾಷ್ಟ್ರದಂತೆ ಬಿಜೆಪಿ ರಾಜ್ಯದಲ್ಲೂ ಸಹ ಮುಖಭಂಗ ಅನುಭವಿಸಲಿದೆ ಎಂದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪನವರು ರಾಜ್ಯದ ಖಜಾನೆ ಖಾಲಿ ಇದೆ ಅಂತಾರೆ. ಖಜಾನೆ ಖಾಲಿ ಇದ್ದರೆ ನೀವು ರಾಜೀನಾಮೆ ಕೊಡಿ. ನನಗೆ ಮುಖ್ಯಮಂತ್ರಿಯಾಗಿ ಖಜಾನೆ ಹೇಗೆ ತುಂಬಿಕೊಳ್ಳಬೇಕು ಅಂತಾ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಸಮಾವೇಶಕ್ಕೆ ಮಳೆ ಅಡ್ಡಿ:
ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಮಳೆ ಸುರಿಯಲಾರಂಭಿಸಿತು. ಮಳೆ ಬರುವುದಿಲ್ಲ, ನೀವು ಕುಳಿತುಕೊಳ್ಳಿ ಎಂದು ಕಾರ್ಯಕರ್ತರಲ್ಲಿ ಸಿದ್ದರಾಮಯ್ಯ ಮನವಿ ಮಾಡಿ ಭಾಷಣ ಆರಂಭಿಸಿದರೂ ಮಳೆರಾಯ ಮಾತ್ರ ನಿಲ್ಲಲಿಲ್ಲ. ಮಳೆಯಿಂದ ಬಚಾವಾಗಲು ಕಾರ್ಯಕರ್ತರು ಕುರ್ಚಿಗಳನ್ನು ತಲೆಯ ಮೇಲೆ ಹಿಡಿದುಕೊಳ್ಳುವಂತಾಯಿತು.