ಹಾವೇರಿ: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪಕ್ಷಗಳ ನಡುವೆ ನಡೆಯುವ ಚುನಾವಣೆಯಲ್ಲ. ಇದು ಅನರ್ಹರ ವಿರುದ್ಧ ಹಾಗೂ ಕ್ಷೇತ್ರದ ಜನರನ್ನ ಅಗೌರವಿಸಿದವರ ವಿರುದ್ಧ ನಡೆಯುವ ಚುನಾವಣೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಹೆಚ್.ಬನ್ನಿಕೋಡ ಅಭಿಪ್ರಾಯಪಟ್ಟಿದ್ದಾರೆ.
ರಟ್ಟಿಹಳ್ಳಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಮತದಾರ ಅನರ್ಹರ ವಿರುದ್ಧ ಸಿಡಿದೆದ್ದಿದ್ದಾರೆ. ಈ ಚುನಾವಣೆಯಲ್ಲಿ ಬಿ.ಸಿ ಪಾಟೀಲ್ಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಬಿ.ಸಿ.ಪಾಟೀಲರಿಗೆ ಬೇಕಾದದ್ದು ಕಾಂಗ್ರೆಸ್ನಲ್ಲಿ ಇರಲಿಲ್ಲ, ಅವರಿಗೆ ಬೇಕಾಗಿದ್ದು, ಬಿಜೆಪಿ ಪಕ್ಷದಲ್ಲಿದೆ. ಅದಕ್ಕೆ ಅವರು ಬಿಜೆಪಿಗೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮ. ನನಗೆ ಪಕ್ಷಾತೀತವಾಗಿ ಜನ ಬೆಂಬಲ ನೀಡುತ್ತಿದ್ದಾರೆ. ಸೂರ್ಯ ಇರುವುದು ಎಷ್ಟು ಸತ್ಯವೋ ಈ ಬಾರಿ ಮತದಾರರು ನನ್ನನ್ನು ಆಯ್ಕೆ ಮಾಡುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.