ಹಾನಗಲ್ (ಹಾವೇರಿ): ದೇವರಿಗೆ ಗುಡಿ ಕಟ್ಟೋದು ಸಾಮಾನ್ಯ. ಆದರೆ, ಮಕ್ಕಳೇ ತಂದೆಯ ಹೆಸರಿನಲ್ಲಿ ದೇವಸ್ಥಾನ ಕಟ್ಟಿಸಿ ಪೂಜಿಸ್ತಿರುವ ಅಪರೂಪ ಸಂಗತಿ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿದೆ.
ರಾಯ್ಕರ್ ಕುಟುಂಬ ತಮ್ಮ ತಂದೆ ದಿ.ವಿಷ್ಣಪ್ಪ ರಾಮಚಂದ್ರಪ್ಪ ಅವರ ಮೂರ್ತಿ ಕೆತ್ತಿಸಿ ದೇವಸ್ಥಾನ ಕಟ್ಟಿಸಿದೆ. ವಿಷ್ಣಪ್ಪರವರು ಮೂಲತಃ ಅಕ್ಕಸಾಲಿ ಕೆಲಸ ಮಾಡುತ್ತಿದ್ದವರು. ರಾಯ್ಕರ್ ಕುಟುಂಬವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ದಿದ್ದಾರಂತೆ. ತಂದೆಯವರ ನೆನಪಿಗೆ ಈ ಒಂದು ದೇವಸ್ಥಾನವಿರಲಿ ಅಂದಾಜು 3 ಲಕ್ಷ ರೂ.ಗಳಲ್ಲಿ ದೇವಸ್ಥಾನ ಕಟ್ಟಿಸಲಾಗಿದೆ. ತಂದೆಯವರು ನಮ್ಮನ್ನ ಒಂದು ಮೂರ್ತಿಯನ್ನಾಗಿ ಮಾಡಿದ್ದಾರೆ.
ನಾವು ನಿತ್ಯ ದೇವರ ಪೂಜೆಯಂತೆ ನಮ್ಮ ತಂದೆಯವರ ಮೂರ್ತಿಗೆ ಪೂಜೆ ಸಲ್ಲಿಸುತ್ತೇವೆ. ಪ್ರತಿವರ್ಷ ತಂದೆಯವರ ಪುಣ್ಯದಿನದಂದು, ಮನೆಯವರೆಲ್ಲ ಸೇರಿ ಹೋಗಿ ಸಿಹಿ ಅಡುಗೆ ಮಾಡಿ ನೈವೇದ್ಯ ಮಾಡಿ ಬರುತ್ತೇವೆ ಅಂತಾರೆ ಮಗ ಸಂಜೀವ ರಾಯ್ಕರ್. ನಮ್ಮ ತಂದೆಯವರು ಕಲಿಸಿದ ಅಕ್ಕಸಾಲಿಗ ಉದ್ಯೋಗದಿಂದ ನಾವು ಇಂದು ಸಂತೋಷದಿಂದ ಇದ್ದೇವೆ. ಇಂತಹ ಹತ್ತು ದೇವಸ್ಥಾನಗಳನ್ನ ನಾವು ಕಟ್ಟಿದರೂ ಅವರ ಋಣ ತೀರಿಸಲು ಸಾಧ್ಯವಿಲ್ಲ.
ಬೆಲೆ ಕಟ್ಟಲಾಗದ ಜೀವಗಳು ಅಂದ್ರೆ ಅದು ತಂದೆ-ತಾಯಿ ಮಾತ್ರ. ಎಷ್ಟೋ ಜನ ಇಂದು ನಮ್ಮ ಈ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಅವರೇ ಶ್ರಮ ಪಟ್ಟು ಸಂಪಾದಿಸಿದ ಜಮೀನಿನಲ್ಲಿ ನಾವು ಅವರ ದೇವಸ್ಥಾನ ಕಟ್ಟಿಸಿದ್ದೇವೆ ಎಂದು ಅವರು ಹೇಳಿದರು. ತಮ್ಮನ್ನ ರೂಪಿಸಿದ ಹೆತ್ತ ತಂದೆಗೆ ಈ ಮಕ್ಕಳು ನೀಡ್ತಿರುವ ಗೌರವ ನಿಜಕ್ಕೂ ಮೆಚ್ಚಲೇಬೇಕು.