ಹಾವೇರಿ : ಕೆರಿಮತ್ತಿಹಳ್ಳಿ ಗ್ರಾಮದ ಕೊಬ್ಬರಿ ಹೋರಿ ರಾಕ್ಷಸ 220 ಹುಟ್ಟು ಹಬ್ಬವನ್ನು ನಿನ್ನೆ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಆಂಜನೇಯ ದೇವಸ್ಥಾನದ ಮುಂದೆ ರಾಕ್ಷಸ 220 ಹೋರಿಯನ್ನು ನಿಲ್ಲಿಸಿ ಕೇಕ್ ಕತ್ತರಿಸಿಸುವ ಮೂಲಕ 8ನೇ ವರ್ಷದ ಜನ್ಮದಿನ ಆಚರಿಸಲಾಯಿತು. ಈ ವೇಳೆ ದೂರದ ಊರುಗಳಿಂದ ಆಗಮಿಸಿದ ಅಭಿಮಾನಿಗಳು ಹೋರಿಗೆ ಮಾಲೆ ಹಾಕಿ ಕೇಕ್ ತಿನ್ನಿಸಿ ಸಂಭ್ರಮಿಸಿದರು. ಬಳಿಕ ರಾಕ್ಷಸ ಹೋರಿಯ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಷ್ಟೇ ಅಲ್ಲದೆ, ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಸುಮಾರು 30 ಕ್ಕೂ ಅಧಿಕ ಅಭಿಮಾನಿಗಳು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಿಯ ಮಾಲೀಕ ಸಿದ್ದಲಿಂಗೇಶ ವಾಲಿ, " ಹೋರಿಯನ್ನು ತಮಿಳುನಾಡಿನಿಂದ ಕಳೆದ ಎಂಟು ವರ್ಷಗಳ ಹಿಂದೆ ಆಕ್ಟೋಬರ್ 6 ರಂದು ತರಲಾಗಿತ್ತು. ಹೋರಿ ಮನೆಗೆ ಬಂದ ದಿನಾಂಕವನ್ನೇ ಸಾಮಾನ್ಯವಾಗಿ ಜನ್ಮದಿನ ಎಂದು ತಿಳಿಯಲಾಗುತ್ತದೆ. ಆ ವರ್ಷದಿಂದಲೇ ಜನ್ಮದಿನ ಆಚರಿಸಲಾಗುತ್ತದೆ " ಎಂದು ತಿಳಿಸಿದರು.
ಇದನ್ನೂ ಓದಿ : ಸಂಪಂಗೆರೆ ರಣಬೇಟೆಗಾರನ ಮೊದಲ ವರ್ಷದ ತಿಥಿ.. ಹೋರಿಯ ಸ್ಮರಣಾರ್ಥ ರಕ್ತದಾನ ಶಿಬಿರ ಏರ್ಪಡಿಸಿದ ಹಾವೇರಿಯ ಅಭಿಮಾನಿಗಳು
ರಾಕ್ಷಸ ಹೋರಿ ಸ್ಪರ್ಧೆಯಲ್ಲಿ ಮಾತ್ರ ರಾಕ್ಷಸ ಅನ್ನುವುದನ್ನು ಬಿಟ್ಟರೆ ಉಳಿದಂತೆ ಸೌಮ್ಯ ಸ್ವಭಾವ ಹೊಂದಿದೆ. ಚಿಕ್ಕಮಕ್ಕಳು ಮುಟ್ಟಿದರು ಸಹ ಏನು ಮಾಡುವುದಿಲ್ಲ. ಆದರೆ, ಸ್ಪರ್ಧೆಯಲ್ಲಿ ಬಿಟ್ಟಾಗ ಮಾತ್ರ ರಾಕ್ಷಸನಂತೆ ವರ್ತಿಸುತ್ತದೆ. ಹೀಗಾಗಿ, ಹೋರಿಯ ಅಭಿಮಾನಿಗಳು ಅದಕ್ಕೆ ರಾಕ್ಷಸ 220 ಎಂದು ನಾಮಕರಣ ಮಾಡಿದ್ದಾರೆ. ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಕ್ಷಸ ಪಾಲ್ಗೊಂಡು ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ಬಹುಮಾನಗಳನ್ನು ಗೆದ್ದು ಬೀಗಿದೆ. ಹೋರಿಗಾಗಿ ಸಿಗುವ ವಿಶೇಷ ಫುಡ್ ತಿನಿಸುವ ಜೊತೆಗೆ ವಿಶೇಷವಾದ ಮೇವು ಹಾಕುತ್ತೇವೆ. ಹೋರಿ ಹಬ್ಬವಿದ್ದಾಗ ರನ್ನಿಂಗ್ ಮತ್ತು ಈಜು ಮಾಡಿಸುವ ಮೂಲಕ ಆಖಾಡಕ್ಕೆ ಸಿದ್ಧಪಡಿಸುತ್ತೇವೆ. ಹೋರಿಯನ್ನು ಸ್ಪರ್ಧೆಗೆ ಮಾತ್ರ ಬಳಸುತ್ತಿದ್ದು, ಕೃಷಿ ಕಾರ್ಯಗಳಿಗೆ ಬಳಸುವುದಿಲ್ಲ ಎಂದರು.
ಇದನ್ನೂ ಓದಿ : ' ಯಜಮಾನ ' ಹೋರಿ ಹುಟ್ಟುಹಬ್ಬ ಆಚರಿಸಿದ ಹಾವೇರಿ ರೈತ ; ಅಭಿಮಾನಿಗಳಿಂದ ರಕ್ತದಾನ ಶಿಬಿರ !
ಇನ್ನು ಹೋರಿ ಕುರಿತಂತೆ ಮಾತನಾಡಿದ ಗ್ರಾಮಸ್ಥ ಬಸವರಾಜ್ ಬಂಕಾಪುರ, "ಈ ಹೋರಿಯಿಂದ ಕೆರಿಮತ್ತಿಹಳ್ಳಿ ಗ್ರಾಮದ ಹೆಸರು ಪ್ರಸಿದ್ಧಿಯಾಗಿದೆ. ಈ ರೀತಿಯ ಹೋರಿ ನಮ್ಮ ಗ್ರಾಮದಲ್ಲಿರುವುದು ಹೆಮ್ಮೆ. ರಾಕ್ಷಸ 220 ನಿಗೆ ಸಾಲುಹಬ್ಬದ ಸರದಾರ, ಸ್ಪೀಡ್ ಕಿಂಗ್, ಅಭಿಮಾನಿಗಳ ಜೀವಾ ಎಂಬ ಹೆಸರಿನಿಂದ ಸಹ ಕರೆಯಲಾಗುತ್ತಿದೆ" ಎಂದು ತಿಳಿಸಿದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಹೋರಿಗೆ ಮುತ್ತಿಕ್ಕಿ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ವಿಶೇಷ ಅಲಂಕಾರದಲ್ಲಿ ಮದುವೆಗೆ ಬಂದು ತನ್ನ ಅಭಿಮಾನಿಯ ಖುಷಿ ಹೆಚ್ಚಿಸಿದ ಕಿಲಾರಿ ಹೋರಿ !