ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸೆಂಬರ್ 22ರ ಒಳಗೆ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ದರೇ ಸಮಾಜ ಒಗ್ಗಟ್ಟಾಗಿ ಅವರಿಗೆ ಸೋಲಿನರುಚಿ ಉಣಿಸಲಿದೆ ಎಂದು 2ಎ ಮೀಸಲಾತಿ ಹೋರಾಟ ಸಮಿತಿಯ ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಹಾಲಪ್ಪನವರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಬೊಮ್ಮಾಯಿ ಅವರು ನಿಗದಿತ ದಿನಾಂಕದೊಳಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು. ಮೀಸಲಾತಿ ನೀಡದಿದ್ದರೆ ರಾಜ್ಯದಲ್ಲಿರುವ ಪಂಚಮಸಾಲಿ ಸಮುದಾಯವದರೆಲ್ಲ ಶಿಗ್ಗಾಂವಿಗೆ ಬಂದು ಸಿಎಂಗೆ ಸೋಲುಣಿಸುತ್ತೇವೆ ಎಂದರು.
ಪಂಚಮಸಾಲಿ ಆಕಾಂಕ್ಷಿಗಳಲ್ಲಿ ಒಬ್ಬರನ್ನು ಸಮಾಜದಿಂದ ಬೊಮ್ಮಾಯಿ ವಿರುದ್ಧ ನಿಲ್ಲಿಸಿ ಗೆಲ್ಲಿಸುತ್ತೇವೆ. ಒಂದು ವೇಳೆ ಮೀಸಲಾತಿ ನೀಡಿದರೆ ರಾಜ್ಯದಲ್ಲಿರುವ ಪಂಚಮಸಾಲಿಗಳೆಲ್ಲಾ ಸೇರಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಕಾರ್ಯ ಮಾಡಲಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಹೋರಾಟ ಸಮಿತಿಯ ಗೌರಾವಾಧ್ಯಕ್ಷ ಸಿ.ಆರ್. ಬಳ್ಳಾರಿ, ಬೊಮ್ಮಾಯಿ ಅವರ ಸರ್ಕಾರಕ್ಕೆ ಈಗಾಗಲೇ ನಾಲ್ಕು ಬಾರಿ ಗಡುವು ನೀಡಲಾಗಿತ್ತು. ಸಿಎಂ ಮೀಸಲಾತಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆಯಲಾಗಿತ್ತು. ಆದರೆ ಈಗ ಡಿಸೆಂಬರ್ 22 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ 25 ಲಕ್ಷ ಪಂಚಮಸಾಲಿಗಳು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಹಿಂದುಳಿದ ವರ್ಗದ ಆಯೋಗದಿಂದ ಆದಷ್ಟು ಬೇಗ ವರದಿ ತರಿಸಿಕೊಂಡು ಮೀಸಲಾತಿ ನೀಡಬೇಕು. ಮೀಸಲಾತಿ ನೀಡಿದರೆ ಸುವರ್ಣಸೌಧದಲ್ಲಿ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು. ಬೊಮ್ಮಾಯಿ ಪ್ರತಿ ಬಾರಿ ಪ್ರತಿಭಟನೆ ನಡೆಸಿದಾಗ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದು ನಮ್ಮ ಅಂತಿಮ ಹೋರಾಟವಾಗಿದ್ದು, ಮೀಸಲಾತಿ ಸಿಗದಿದ್ದರೆ ಇದೇ 22 ರಂದು ಮುಂದಿನ ಹೋರಾಟ ರೂಪುರೇಷೆ ರಚಿಸಲಾಗುವುದು ಎಂದು ತಿಳಿಸಿದರು.
ಸವದತ್ತಿಯಿಂದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಆರಂಭಿಸಿದ್ದು, ಇದೇ 22 ರಂದು ಶ್ರೀಗಳು ಬೆಳಗಾವಿಗೆ ಆಗಮಿಸಿ ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಿ.ಆರ್. ಬಳ್ಳಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: ಹೆಚ್ ವಿಶ್ವನಾಥ್‌ಗೆ 15 ಕೋಟಿ ರೂಪಾಯಿ: ತನಿಖೆ ಕೋರಿ ಚುನಾವಣಾ ಆಯೋಗ, ಇಡಿಗೆ ಆಪ್ ದೂರು