ಹಾವೇರಿ: ತಾಲೂಕಿನ ಕರ್ಜಗಿಯಲ್ಲಿ ಗುರುವಾರ ನಡೆದ ಬಂಡಿ ಉತ್ಸವದಲ್ಲಿ ಕೋವಿಡ್-19 ನಿಯಮ ಉಲ್ಲಂಘನೆಯಾಗಿದೆ. ಈ ಹಿನ್ನೆಲೆ ಬಂಡಿ ಉತ್ಸವ ಆಯೋಜಿಸಿದ್ದ 40 ಜನರ ಮೇಲೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಗ್ರಾಮಸ್ಥರಿಗೆ ತಿಳಿಹೇಳಲಾಗಿತ್ತು. ಅಲ್ಲದೆ ಈ ವರ್ಷ ಬಂಡಿ ಉತ್ಸವ ಇಲ್ಲವೆಂದು ಪ್ರಕಟಣೆ ಸಹ ಹೊರಡಿಸಲಾಗಿತ್ತು. ಆದರೂ ಸಹ ಗ್ರಾಮದ ಕೆಲವರು ಸಂಪ್ರದಾಯ ಆಚರಿಸಿದ್ದಾರೆ. ಇದರಿಂದ ಕೋವಿಡ್-19 ನಿಯಮ ಉಲ್ಲಂಘನೆಯಾಗಿದೆ. ಈ ಕುರಿತಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.