ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಆಸೀಫ್ ಅವರು ಗಡಿ ಭದ್ರತಾಪಡೆಯ ನಿವೃತ್ತ ಯೋಧ. ಇವರಿಗೆ ಕ್ರೀಡೆಯಲ್ಲಿ ಮಿಂಚಬೇಕು ಎನ್ನುವ ಕನಸು. ಆದರೆ, ದೇಹಕ್ಕೆ ಆದ ಫ್ಯಾಕ್ಚರ್ ಇವರ ಕನಸನ್ನ ನುಚ್ಚುನೂರು ಮಾಡಿತು. ಆದರೆ, ಈ ಮಾಜಿ ಯೋಧನ ಕನಸನ್ನು ಮಗ ನನಸು ಮಾಡಲಿ ಎಂದು ಶ್ರಮಿಸುತ್ತಿದ್ದಾರೆ.
ತನ್ನ ಐದು ವರ್ಷದ ಮಗ ಮೊಹ್ಮದ್ ಜೈದ್ಗೆ ಯೋಗ, ಮ್ಯಾರಾಥಾನ್, ಬಾಕ್ಸಿಂಗ್ ಹಾಗೂ ಜೋಡೋ ಪ್ರಾಕ್ಟಿಸ್ ಮಾಡಿಸುತ್ತಿದ್ದಾರೆ. ತನ್ನ ಮಗ ವರ್ಲ್ಡ್ ಚಾಂಪಿಯನ್ ಆಗಬೇಕು, ಆ ಮೂಲಕ ನನ್ನ ಕನಸು ನನಸಾಗಬೇಕು ಎನ್ನುವ ಆಸೀಫ್ ತನ್ನ ಮಗನ ಸಾಧನೆಗೆ ಸಾಥ್ ನೀಡುತ್ತಿದ್ದಾರೆ.
ಐದು ವರ್ಷದ ಬಾಲಕ ಮೊಹ್ಮದ್ ಜೈದ್‌ನಿಗೆ ಕ್ರೀಡೆ ಅಂದರೆ ಸಾಕು ಹುಚ್ಚುಪ್ರೇಮ. ಅದರಲ್ಲೂ ಓಟ, ಯೋಗ, ಜೋಡೋ ಹಾಗೂ ಬಾಕ್ಸಿಂಗ್‌ನಲ್ಲಿ ಮೊಹ್ಮದ್ ಜೈದ್ ವಿಶೇಷ ಆಸಕ್ತಿ ಹೊಂದಿದ್ದಾನೆ. ಮೊಹ್ಮದ್ ಜೈದ್ನ ಈ ಆಸಕ್ತಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ತಂದೆ ಆಸೀಫ್.
ಹೌದು ಮೊಹ್ಮದ್ ಜೈದ್ ತಂದೆ ಆಸೀಫ್ ಮಗನಿಗೆ ಓಟ, ಬಾಕ್ಸಿಂಗ್, ಜೋಡೋ ಮತ್ತು ಯೋಗದಲ್ಲಿ ತರಬೇತಿ ನೀಡುತ್ತಿದ್ದಾರೆ. ಆಸೀಫ್ ಗಡಿಭದ್ರತಾ ಪಡೆಯಲ್ಲಿ ಯೋಧರಾಗಿ ನಿವೃತ್ತಿಯಾಗಿದ್ದಾರೆ. ಆಸೀಫ್‌ಗೆ ಮೊದಲಿನಿಂದಲೂ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸು. ಆದರೆ, ದೇಹಕ್ಕಾದ ದೊಡ್ಡ ಗಾಯದಿಂದ ಆಸೀಫ್ ಕನಸು ನುಚ್ಚುನೂರು ಮಾಡಿತು. ಕ್ರೀಡೆಯಲ್ಲಿ ತಾನು ಸಾಧನೆ ಮಾಡದಿದ್ದರೇ ಏನಾಯಿತು ತನ್ನ ಮಗ ಸಾಧನೆ ಮಾಡಲಿ ಅಂತಾ ಆಸೀಫ್ ಮಗನಿಗೆ ಈ ಕ್ರೀಡೆಗಳಲ್ಲಿ ತರಬೇತಿ ನೀಡುತ್ತಿದ್ದಾರೆ.
ಮೊಹ್ಮದ್ ಜೈದ್ ಮ್ಯಾರಾಥಾನ್‌ನಲ್ಲಿ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿದ್ದಾನೆ. ನಿತ್ಯ ಮುಂಜಾನೆ ನಾಲ್ಕು ಗಂಟೆಗೆ ಎದ್ದು 8 ಕಿಲೋ ಮೀಟರ್ ಓಡುತ್ತಾನೆ. ಬಿಡುವು ಸಿಕ್ಕಾಗಲೆಲ್ಲಾ ಜೋಡೋ, ಬಾಕ್ಸಿಂಗ್ ಮತ್ತು ಯೋಗ ಮಾಡುತ್ತಾನೆ. ತನ್ನ ತಂದೆ ಕನಸು ನನಸು ಮಾಡುವ ಇಂಗಿತವನ್ನ ಮೊಹ್ಮದ್ ಜೈದ್ ವ್ಯಕ್ತಪಡಿಸುತ್ತಿದ್ದಾನೆ. ಇನ್ನು ಮೊಹ್ಮದ್ ಜೈದ್‌ನಿಗೆ ಸರಿಯಾದ ತರಬೇತಿ ಸಿಕ್ಕರೆ ವಿಶ್ವದಾಖಲೆ ಮಾಡಬಹುದು ಎನ್ನುತ್ತಾರೆ ಸ್ಥಳೀಯ ಕ್ರೀಡಾ ಪ್ರೇಮಿಗಳು.
ಮೊಹ್ಮದ್ ಜೈದ್ ಈಗಾಗಲೇ ದೇಶದ ವಿವಿಧಡೆ ನಡೆದ ಚಿಣ್ಣರ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದಾನೆ. ಅಲ್ಲದೇ ಈ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದು ಕೊರಳಗೇರಿಸಿಕೊಂಡಿದ್ದಾನೆ. ಈ ಪುಟ್ಟ ಬಾಲಕನ ಕ್ರೀಡಾ ಪ್ರೇಮಕ್ಕೆ ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.