ಹೊಳೆನರಸೀಪುರ : ತಾಲೂಕು ಹಳ್ಳಿಮೈಸೂರು ಹೋಬಳಿಯ ರಂಗೇನಹಳ್ಳಿ ಗ್ರಾಮದ 19 ವರ್ಷದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿರುವ ಘಟನೆ ನಡೆದಿದೆ.
ಸೆಪ್ಟೆಂಬರ್ 26 ರ ಮಧ್ಯಾಹ್ನ, ಕೆ.ಆರ್.ಪೇಟೆಯ ಮಂದಗೆರೆ ಹತ್ತಿರದ ಕಾಳೇನಹಳ್ಳಿಯ ಪ್ರತಾಪ್ ಎಂಬಾತ 4 ಜನರ ಜೊತೆ ಸೇರಿ, ರಂಗೇನಹಳ್ಳಿಯ ಒಂಟಿ ಮನೆಯಲ್ಲಿದ್ದ ಯುವತಿಯ ಬಾಯಿ ಮುಚ್ಚಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಬಳಿಕ ಕೆ.ಆರ್.ಪೇಟೆಯಲ್ಲಿ ಮತ್ತೊಂದು ವಾಹನವನ್ನು ಬದಲಿಸಿ ಹುಣಸೂರಿನ ಕೆ.ಬಿ.ಕೊಪ್ಪಲು ಹತ್ತಿರ ಹೋಗುತ್ತಿದ್ದಾಗ, ಯುವತಿ ಬಾತ್ ರೂಮ್‌ಗೆ ಹೋಗಬೇಕೆಂದು ಚೀರಾಡಿದ್ದಾಳೆ. ಈ ವೇಳೆ, ಗ್ರಾಮದ ಪರಿಚಯಸ್ಥರ ಮನೆಗೆ ಆಕೆಯನ್ನು ಕಳಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ನಮ್ಮ ತಂದೆಗೆ ಒಂದು ಫೋನ್ ಕಾಲ್ ಮಾಡಬೇಕು ಎಂದು ಯುವತಿ ಕೇಳಿದ್ದಾಳೆ. ಆದರೆ, ಕರೆ ಮಾಡಲು ಮನೆಯವರು ನಿರಾಕರಿಸಿದ್ದಾರೆ. ಯುವತಿ ಎದುರುಗಡೆ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು, ತನ್ನನ್ನು ಅಪಹರಿಸಿರುವುದಾಗಿ ವಿವರಿಸಿದ್ದಾಳೆ. ಆಗ ಆ ಮನೆಯವರು ಹೊರಬಂದು, ಇನ್ನೊಬ್ಬರ ಮನೆಯ ಯುವತಿಯನ್ನು ಯಾಕೆ ಅಪಹರಿಸಿದ್ದಿ ಎಂದು ಆರೋಪಿ ಪ್ರತಾಪ್ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ಅವರಿಗೆ ಪ್ರತಾಪ್ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಅಷ್ಟೊತ್ತಿಗಾಗಲೇ ಸುತ್ತ-ಮುತ್ತಲ ಮನೆಯವರು ಸ್ಥಳದಲ್ಲಿ ಸೇರಿದ್ದರಿಂದ, ಪ್ರತಾಪ್ ಯುವತಿಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ಬಳಿಕ, ಪೋಷಕರಿಗೆ ಕರೆ ಮಾಡಿದ ಯುವತಿ, ಇಂತಹ ಸ್ಥಳದಲ್ಲಿದ್ದೇನೆ ಎಂದು ತಿಳಿಸಿದ್ದಾಳೆ. ಪೋಷಕರು ಕೆ.ಬಿ.ಕೊಪ್ಪಲಿಗೆ ತೆರಳಿ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಈ ಬಗ್ಗೆ ಹಳ್ಳಿಮೈಸೂರು ಠಾಣೆಗೆ ಯುವತಿ ಪೋಷಕರು ದೂರು ನೀಡಿದ್ದು, ಪ್ರತಾಪ್ ಸೇರಿ ಒಟ್ಟು 18 ಆರೋಪಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.