ಹಾಸನ: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ತೊಡೆತಟ್ಟಿದ್ರೆ, ನಮ್ಮಲ್ಲಿ ಈಶ್ವರಪ್ಪ ಇಲ್ವಾ ತೊಡೆತಟ್ಟೋದಕ್ಕೆ...?. ಅಹಿಂದ ನಾಯಕ ಕೇವಲ ಕಾಂಗ್ರೆಸ್ನಲ್ಲಷ್ಟೇ ಇಲ್ಲ, ಬಿಜೆಪಿಯಲ್ಲೂ ಇದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ವಸತಿ ಸಚಿವ ವಿ. ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಿಂದ ಮಡಿಕೇರಿಗೆ ಹೋಗುವ ಮಾರ್ಗಮಧ್ಯೆ ಹೊಳೆನರಸೀಪುರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು. ರಾಜ್ಯ ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರವನ್ನು ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಯಡಿಯೂರಪ್ಪ ಅವರ ಕಾಲ್ಗುಣ ಚೆನ್ನಾಗಿದೆ. ಅವರು ಮುಖ್ಯಮಂತ್ರಿ ಆದ ಬಳಿಕ ಎಲ್ಲ ಕೆರೆಕಟ್ಟೆಗಳು ಕೂಡ ತುಂಬಿ ತುಳುಕುತ್ತಿವೆ. ಅದೇ ರೀತಿ ಉಪಚುನಾವಣೆಯಲ್ಲೂ ಗೆದ್ದೆ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಮತ್ತು ನಾರಾಯಣ ಗೌಡ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಅವರಿಗೆ ಮಂತ್ರಿಸ್ಥಾನ ಕೊಡಬಾರದು ಅಂತ ತಮ್ಮ ಪಕ್ಷದಲ್ಲಿಯೇ ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲವನ್ನೂ ನಾವೇ ನಿರ್ಧರಿಸುವುದಕ್ಕೆ ಆಗುವುದಿಲ್ಲ. ಯಾವ ಯಾವ ಕಾಲಕ್ಕೆ ಯಾರ್ಯಾರು ಏನೇನು ಆಗಬೇಕು ಅದೆ ಆಗಲಿದೆ. ಈಗಲೇ ಚಿಂತೆ ಬೇಡ ಎಂದರು.
ಇನ್ನು ರಾಜ್ಯ ಪ್ರವಾಹ-ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ಈ ಬಾರಿ ಪ್ರವಾಹ ಎದುರಾಗಿದ್ದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವುದು ಸತ್ಯ. ಪ್ರಕೃತಿ ಮುನಿದರೆ ಯಾರು ಏನನ್ನೂ ಮಾಡಲಾಗುವುದಿಲ್ಲ. ನೆರ ಸಂತ್ರಸ್ತರಿಗೆ ಈಗಾಗಲೇ ಹಂತ ಹಂತವಾಗಿ ಪರಿಹಾರ ನೀಡಲಾಗುತ್ತಿದ್ದು, ಇಂದು ಮತ್ತು ನಾಳೆ ನಾನು ಮಡಿಕೇರಿಯಲ್ಲಿ ವಾಸ್ತವ್ಯ ಹೂಡಿ ಕಳೆದಬಾರಿ ಮತ್ತು ಈ ಬಾರಿ ಆಗಿರುವ ಹಾನಿಯ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಅವರು ನೋವಿನಿಂದ ಹೊರಬರುವಂತಹ ಮಾರ್ಗೋಪಾಯಗಳನ್ನು ಕಂಡು ಕೊಳ್ಳುವಂತಹ ಕೆಲಸ ಮಾಡುತ್ತೇನೆ ಎಂದರು.