ಹಾಸನ: ಕುಡಿದ ಅಮಲಿನಲ್ಲಿ ಎರಡು ತಂಡದ ನಡುವೆ ಗಲಾಟೆ ಆಗಿ ಓರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ನಗರದ ರಿಂಗ್ ರೋಡ್ ಸಮೀಪದ ಉಲ್ಲಾಸ್ ಬಾರ್ ಎದುರಿರುವ ಜಿಆರ್ಆರ್ ಹೋಟೆಲ್ನಲ್ಲಿ ನಡೆದಿದೆ.
ಶರತ್ ದೇವಾಡಿಗ(27) ಹಲ್ಲೆಗೊಳಗಾದ ಮಂಗಳೂರು ಮೆಸ್ ಎಂಬ ಹೋಟೆಲ್ ಮಾಲೀಕ. ದಾಸರ ಕೊಪ್ಪಲು ಸಂತೋಷ್ (25) ಅಲಿಯಾಸ್ ಬುಲ್ಲಿ ಮತ್ತು ದಿಲೀಪ್ (28) ಅಲಿಯಾಸ್ (ದಿಲ್ಲು) ಚೇತನ್ (27) ಮತ್ತು ಕಿರ್ತನ್(28) ಹಲ್ಲೆ ಮಾಡಿದ ಆರೋಪಿಗಳು.
ನಿನ್ನೆ ರಾತ್ರಿ ಜಿಆರ್ಆರ್ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿ ಶರತ್ ದೇವಾಡಿಗ ಮತ್ತು ಸಂತೋಷ್ ನಡುವೆ ಗಲಾಟೆ ಆಗಿದೆ. ಗಲಾಟೆಯಲ್ಲಿ ಸಂತೋಷ್ ಮತ್ತು ದಿಲೀಪ್ ಜೊತೆಗಿದ್ದ ಮತ್ತಿಬ್ಬರು ಆರೋಪಿಗಳು ಮಾತಿನ ಚಕಮಕಿಯಲ್ಲಿ ಏಕಾಏಕಿ ಶರತ್ ದೇವಾಡಿಗ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಶರತ್ ದೇವಾಡಿಗನನ್ನು ಸದ್ಯ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಆತ ನೀಡುವ ಹೇಳಿಕೆಯ ಮೇಲೆ ಘಟನೆಯ ಸಂಪೂರ್ಣ ಸತ್ಯಾಂಶ ಗೊತ್ತಾಗಲಿದೆ.
ಪೊಲೀಸರು ಹೇಳುವ ಪ್ರಕಾರ, ಮೇಲ್ನೋಟಕ್ಕೆ ಹಲ್ಲೆಗೊಳಗಾದ ಶರತ್ ಮತ್ತು ಆರೋಪಿಗಳು ಒಬ್ಬರಿಗೊಬ್ಬರು ಸ್ನೇಹಿತರಲ್ಲ, ಅವರ ನಡುವೆ ಯಾವ ದ್ವೇಷವೂ ಇಲ್ಲ. ಕೇವಲ ಕುಡಿದ ಅಮಲಿನಲ್ಲಿ ಈ ರೀತಿಯ ಘಟನೆ ಸಂಭವಿಸಿದೆ. ಚಿಕಿತ್ಸೆಗೆ ಒಳಗಾಗಿರುವ ಶರತ್ಗೆ ಪ್ರಜ್ಞೆ ಬಂದ ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಹಾಸನ ಬಡಾವಣೆ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.
ಜಿಲ್ಲೆಯಲ್ಲಿ ಕೇವಲ ಸಣ್ಣ ಸಣ್ಣ ವಿಚಾರಕ್ಕೂ ಕೂಡ ಮಾರಣಾಂತಿಕ ಹಲ್ಲೆ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ಹಿಂದೆ ಇದೇ ರಸ್ತೆಯ ಉಲ್ಲಾಸ ಬಾರ್ ಬಳಿ ಮದ್ಯಪಾನ ವಿಚಾರಕ್ಕೆ ಬಾಟಲಿಯಲ್ಲಿ ಹೊಡೆದು ವ್ಯಕ್ತಿಯೋರ್ವನನ್ನು ಪಡ್ಡೆ ಹುಡುಗರು ಬಲಿ ತೆಗೆದುಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಸಂಭವಿಸಿರುವುದು ಹಾಸನ ನಗರದ ಜನರನ್ನು ಬೆಚ್ಚಿ ಬೀಳಿಸಿದೆ.