ಹೊಳೆನರಸೀಪುರ(ಹಾಸನ): ಮುಂಬೈನಿಂದ ಬಂದವರನ್ನು ತಮ್ಮ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಮಾಡುತ್ತಿರುವುದಕ್ಕೆ ಜನರು ವಿರೋಧ ವ್ಯಕ್ತಪಡಿಸಿ, ಆ್ಯಂಬುಲೆನ್ಸ್ ಮೇಲೆ ಕಲ್ಲು ತೂರಾಡಿರುವ ಘಟನೆ ತಾಲೂಕಿನ ದೇವರ ಮುದ್ದನಹಳ್ಳಿಯಲ್ಲಿ ನಡೆದಿದೆ.
ಮೇ 15ರಂದು ಮುಂಬೈಯಿಂದ ಬಂದಿದ್ದ ಒಂದೇ ಕುಟುಂಬದವರನ್ನು ತಟ್ಟೆಕೆರೆ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಸ್ಥಳಾವಕಾಶದ ಅಭಾವ ಇದ್ದುದರಿಂದ ತಾಲೂಕು ಆಡಳಿತ ಅವರನ್ನು ಆ್ಯಂಬುಲೆನ್ಸ್ ಮೂಲಕ ದೇವರ ಮುದ್ದನಹಳ್ಳಿ ಶಾಲೆಗೆ ಸ್ಥಳಾಂತರ ಮಾಡಲು ಮುಂದಾದ ವೇಳೆ ಗ್ರಾಮಕ್ಕೆ ಬಂದ ಆ್ಯಂಬುಲೆನ್ಸ್ ತಡೆದರು. ಈ ವೇಳೆ ಏಕಾಏಕಿ ಕಲ್ಲು ತೂರಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಆ್ಯಂಬುಲೆನ್ಸ್ ಚಾಲಕ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ತಟ್ಟೆಕೆರೆ ವಸತಿ ಶಾಲೆಗೆ ಅವರನ್ನು ಬಿಟ್ಟು ಬಂದಿದ್ದಾನೆ. ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಗ್ರಾಮಸ್ಥರ ಮನವೊಲಿಸಿದ್ದಾರೆ.