ಹಾಸನ: ಮೈಸೂರಿನಿಂದ ಇಂದು ಸಂಜೆ 10 ಸಾವಿರದ 500 ಕೊರೊನಾ ಲಸಿಕೆ ಬಂದಿದ್ದು, ಹಾಸನದ ಆರೋಗ್ಯಾಧಿಕಾರಿಗಳ ಕಛೇರಿ ಆವರಣಕ್ಕೆ ಬಂದ ವಾಹನಕ್ಕೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಲಾಯಿತು.
ಕೊವಿಶೀಲ್ಡ್ ವ್ಯಾಕ್ಸಿನ್ ಡೋಸೇಜ್ಗಳನ್ನು ಸದ್ಯ 46 ಸಾವಿರ ಮಂದಿಗೆ ನೀಡುವಷ್ಟು ಸಂಗ್ರಹಣೆಯಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಆರೋಗ್ಯ ಅಧಿಕಾರಿಗಳ ಕಚೇರಿಗೆ ತರಲಾಯಿತು. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 10 ಕಡೆ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ ತಲಾ 100 ಮಂದಿಗೆ ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ ಸಾವಿರ ಮಂದಿಗೆ ನಾಳೆ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದರು.
ನಾಳೆಯಿಂದ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಮೊದಲಿಗೆ ಆರೋಗ್ಯ ಸಿಬ್ಬಂದಿಗೆ ನೀಡಲಾಗುತ್ತಿದ್ದು ಹಾಸನದಲ್ಲಿ 18 ಸಾವಿರದ 400 ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಪೊಲೀಸರಿಗೆ, ಕಂದಾಯ ಅಧಿಕಾರಿಗಳಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಸರ್ಕಾರ ಸೂಚನೆ ನೀಡಿದ ಬಳಿಕ ಜಿಲ್ಲೆಯ ಉಳಿದ ಮಂದಿಗೆ ನೀಡಲಾಗುತ್ತದೆ ಎಂದರು.
ಹೆಮ್ಮಾರಿ ಕೊರೊನಾಗೆ ಯಾವಾಗ ಲಸಿಕೆ ಬರುತ್ತದೆ ಎಂದು ಕಾಯುತ್ತಿದ್ದ ಜಿಲ್ಲೆಯ ಮಂದಿಗೆ ಇಂದು ಸಂಕ್ರಾಂತಿ ದಿನವೇ ಮೈಸೂರಿನಿಂದ ಲಸಿಕೆ ಎಂಬ ಸಂಜೀವಿನಿ ಆಗಮಿಸಿರುವುದು ಸುಗ್ಗಿಯ ಜೊತೆಗೆ ಡಬಲ್ ಖುಷಿಯಾಗಿದೆ.