ಹಾಸನ : ದೇಶದಾದ್ಯಂತ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸನ ನಗರದ ಬಿಜಿವಿಎಸ್ ಪ್ರೌಢಶಾಲೆಯಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗ್ತಿದೆ.
1 ರಿಂದ 9ನೇ ತರಗತಿವರೆಗೆ ಯಾವುದೇ ಪರೀಕ್ಷೆ ಇಲ್ಲದೆ ಎಲ್ಲಾ ವಿದ್ಯಾರ್ಥಿಗಳನ್ನ ಉತ್ತೀರ್ಣರನ್ನಾಗಿ ಮಾಡಲಾಗಿದೆ. ಆದರೆ, ಎಸ್ಎಸ್ಎಲ್ಸಿ ಪರೀಕ್ಷೆ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಇಲ್ಲದ ಕಾರಣ ಈ ಪ್ರಯತ್ನ ಮಾಡಲಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಹಾಸನ ಜಿಲ್ಲೆಯು ಉತ್ತಮ ಫಲಿತಾಂಶ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಅದೇ ರೀತಿ ಈ ಸಾಲಿನಲ್ಲಿ ಡಿಡಿಪಿಒ, ಬಿಇಒ ಹಾಗೂ ಎಲ್ಲಾ ಶಿಕ್ಷಕರು ಉತ್ತಮ ತಯಾರಿ ನಡೆಸಿದ್ದಾರೆ.
ಸುಮಾರು ಒಂದು ತಿಂಗಳು ಕೊರೊನಾ ರಜೆ ಹಿನ್ನೆಲೆ ಮನೆಯಲ್ಲಿ ಉಳಿದುಕೊಂಡಿರುವ ಮಕ್ಕಳು ಓದಿನ ಕಡೆಗೆ ಗಮನ ಕೊಡದಿದ್ದರೆ ಈ ಪ್ರಯತ್ನವೆಲ್ಲ ವ್ಯರ್ಥವಾಗಲಿದೆ. ಹಾಗಾಗಿ ತಮ್ಮ ಕಾಲೇಜಿನ ಎಲ್ಲಾ ವಿಷಯಗಳ ಶಿಕ್ಷಕರನ್ನು ಬಳಸಿ ವಿಡಿಯೋ ತಯಾರಿಸಿ ಯುಟ್ಯೂಬ್ ಚಾನೆಲ್ಗೆ ಅಪ್ಲೋಡ್ ಮಾಡಲಾಗುತ್ತಿದೆ. ಈ ಚಾನೆಲ್ ನ ರಾಜ್ಯದ ಯಾವ ಶಾಲೆಯ ವಿದ್ಯಾರ್ಥಿಗಳು ಬೇಕಾದರೂ ನೋಡಬಹುದು ಎಂದು ಶಾಲೆಯ ಪ್ರಾಂಶುಪಾಲ ವಿಕ್ರಮ್ ದೇವ್ ಪ್ರಭು ತಿಳಿಸಿದ್ದಾರೆ.
ಪ್ರತಿದಿನ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಎರಡು ಅಧ್ಯಯನಗಳನ್ನ ಅಪ್ಲೋಡ್ ಮಾಡಲಾಗುತ್ತಿದೆ. ಇದು ಕನ್ನಡ ಹಾಗೂ ಇಂಗ್ಲೀಷ್ ಎರಡು ಅವತರಣಿಕೆಯಲ್ಲೂ ಲಭ್ಯವಿದೆ. ಬಿಜಿವಿಎಸ್ ಶಾಲೆಯ ವಿದ್ಯಾರ್ಥಿಗಳು ನಿತ್ಯ ಬೆಳಗ್ಗೆ 8 ರಿಂದ 10ರವರೆಗೆ ಮಾತ್ರವೇ ಈ ಚಾನೆಲ್ ನೋಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಶಾಲೆಯ ವಿದ್ಯಾರ್ಥಿಗಳ ಪೋಷಕರ ವಾಟ್ಸ್ಆ್ಯಪ್ ಗುಂಪು ರಚನೆ ಮಾಡಿದೆ. 10 ರಿಂದ 10.30ರವರೆಗೆ ವಿಷಯಕ್ಕೆ ಸಂಬಂಧಿಸಿದಂತೆ ಹೋಂ ವರ್ಕ್ ನೀಡಲಾಗುವುದು.
ರಾತ್ರಿ 8 ಗಂಟೆಯವರೆಗೆ ಹೋಂ ವರ್ಕ್ ಮುಕ್ತಾಯ ಮಾಡಲು ಅವಕಾಶವಿದೆ. ವಿಷಯವಾರು ಶಿಕ್ಷಕರಿಗೆ ವಾಟ್ಸ್ಆ್ಯಪ್ ಮೂಲಕ ಹೋಂ ವರ್ಕ್ ಫೋಟೋ ಕಳುಹಿಸಬೇಕು. ಅಲ್ಲದೇ ವಿದ್ಯಾರ್ಥಿಗಳಿಗೆ ಪ್ರಶ‍್ನೆ ಕೇಳಲು ಅವಕಾಶವಿದೆ. ಕಾಮೆಂಟ್ ಬಾಕ್ಸ್ ನಲ್ಲಿ ಬರೆದರೆ ಶಿಕ್ಷಕರು ಉತ್ತರಿಸಲಿದ್ದಾರೆ' ಎಂದು ಮಾಹಿತಿ ನೀಡಿದರು. ಯುಟ್ಯೂಬ್ನಲ್ಲಿ aceshassan ಎಂದು ಬರೆದು ಸರ್ಚ್ ಮಾಡಿದರೆ ಸಂಸ್ಥೆಯ ಲೋಗೋ ಕಾಣಿಸಲಿದೆ. ಅದರ ಪಕ್ಕದಲ್ಲಿರುವ ಸ್ಕ್ರೈಬ್ ಕ್ಲಿಕ್ ಮಾಡಿದರೆ ಎಲ್ಲಾ ವಿಡಿಯೋಗಳನ್ನು ನೋಡಬಹುದು.