ಹಾಸನ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಬೆದರಿಸಿ ಅತ್ಯಾಚಾರವೆಸಗಿರುವ ಘಟನೆ ಏಪ್ರಿಲ್ 19ರಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಸಂತೋಷ್ (22) ಎಂಬುವವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಶೇಷ ತಂಡ ರಚಿಸಿ ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಕರಣದ ಹಿನ್ನೆಲೆ: ಪ್ರಥಮ ಪಿಯುಸಿ ಓದುತ್ತಿರುವ ಬಾಲಕಿಯನ್ನು ಆರೋಪಿ ಸಂತೋಷ ಪ್ರೀತಿಸುತ್ತಿದ್ದ ಎನ್ನಲಾಗುತ್ತಿದೆ. ಈ ವಿಚಾರ ತಿಳಿದ ಬಾಲಕಿ ಪೋಷಕರು ಆರೋಪಿಗೆ ಎಚ್ಚರಿಕೆ ನೀಡಿದ್ದಾರೆ. ಬಾಲಕಿಯ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮನೆಯಲ್ಲಿಯೇ ಇರಿಸಿದ್ದರು ಎನ್ನಲಾಗಿದೆ.
ಏಪ್ರಿಲ್ 19ರಂದು ಬಾಲಕಿ ಮನೆಯಿಂದ ಜಮೀನಿಗೆ ಹೋಗುವ ವೇಳೆ ಬೈಕ್ನಲ್ಲಿ ಬಂದ ಸಂತೋಷ ಹಾಗೂ ಸ್ನೇಹಿತರು ಆಕೆಯನ್ನು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಅತ್ಯಾಚಾರವೆಸಗಿ ಈ ವಿಷಯ ಬೇರೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಏಪ್ರಿಲ್ 20ರಂದು ಬಾಲಕಿಯನ್ನು ಮನೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಬಾಲಕಿಯ ಪಾಲಕರು ಆರೋಪಿಸಿದ್ದಾರೆ.
ಘಟನೆಯಿಂದ ಗಾಬರಿಗೊಂಡಿದ್ದ ಬಾಲಕಿ ಚಿಕ್ಕಪ್ಪನ ಮನೆಗೆ ಹೋಗಿ ನಡೆದ ವಿಚಾರ ಹೇಳಿದ್ದಾಳೆ. ಸಂತೋಷನ ವಿರುದ್ಧ ಸಾಕಷ್ಟು ಆರೋಪಗಳಿವೆ. ಈಗಾಗಲೇ ಆತ ಇಬ್ಬರು ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಮರ್ಯಾದೆಗೆ ಹೆದರಿ ಆತನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿಲ್ಲ ಎಂದು ಬಾಲಕಿ ತಂದೆ ಆರೋಪಿಸಿದ್ದಾರೆ.
ನನ್ನ ಮಗಳಿಗಾದ ಅನ್ಯಾಯ ಬೇರೆ ಯಾವ ಕುಟುಂಬದ ಹೆಣ್ಣುಮಕ್ಕಳಿಗೂ ಆಗಬಾರದು ಎಂಬ ಕಾರಣಕ್ಕೆ ನಾವು ಪ್ರಕರಣ ದಾಖಲಿಸಿದ್ದೇವೆ. ಇಂತಹ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ತನಿಖೆ ವೇಳೆ ಬಾಲಕಿಯ ಹೇಳಿಕೆ ಪಡೆದಿರುವ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ. ಬಾಲಕಿಯನ್ನು ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.