ಹಾಸನ: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಸರ್ಕಾರ ಸೋಂಕಿತರ ತಪಾಸಣೆಗೆ ನೀಡಿರುವ ನಿರ್ದಿಷ್ಟ ಗುರಿಯನ್ನು ನಿತ್ಯ ಪೂರ್ಣಗೊಳಿಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಕೋವಿಡ್ ಹಾಗೂ ನೆರೆ ಸಿದ್ಧತೆ ಕುರಿತು ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾ ಗುಣಲಕ್ಷಣಗಳಿರುವ ಎಲ್ಲರನ್ನೂ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿ, ಶೀಘ್ರವಾಗಿ ಸೋಂಕಿತರನ್ನು ಪತ್ತೆಮಾಡಿ ಎಂದು ತಾಕೀತು ಮಾಡಿದರು.
ಕೋವಿಡ್ ಗಂಟಲು ದ್ರವ ಪರೀಕ್ಷೆ ಪ್ರಯೋಗಾಲಯಗಳಲ್ಲಿ ಪರೀಕ್ಷಾ ವರದಿ ಮತ್ತು ಅಂಕಿಅಂಶ ವರದಿ ತಡವಾಗುತ್ತಿದೆ. ಅವಶ್ಯವಿರುವಷ್ಟು ಸಿಬ್ಬಂದಿ ನೇಮಿಸಿಕೊಂಡು ಮೂರು ಶಿಫ್ಟ್ನಲ್ಲಿ ಕೆಲಸ ಮಾಡಿ. ಸೋಂಕಿತರ ಮರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಾಥಮಿಕ ಸಂಪರ್ಕಿತರ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಿ. ಶೀಘ್ರವೇ ಸೋಂಕಿತರನ್ನು ಪತ್ತೆಹಚ್ಚಿ ಸಾವಿನ ಸಂಖ್ಯೆ ತಗ್ಗಿಸುವಂತೆ ನಿರ್ದೇಶಿಸಿದರು.
ನೆರೆ ಹಾವಳಿ ಮತ್ತು ಅತಿಯಾದ ಮಳೆಯಿಂದ ಯಾವುದೇ ಜೀವ ಹಾನಿಯಾಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳಿ. ಹಾನಿಗೊಳಗಾದವರಿಗೆ 24 ಗಂಟೆಯೊಳಗೆ ಪರಿಹಾರ ಲಭಿಸಬೇಕು ಎಂದು ಹೇಳಿದರು.
ವಿಡಿಯೋ ಸಂವಾದದ ಬಳಿಕ ಜಿಲ್ಲಾಧಕಾರಿ ಆರ್. ಗಿರೀಶ್ ಮಾತನಾಡಿ, ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಸರ್ಕಾರ ನಿಗಧಿ ಪಡಿಸಿರುವ ನಿರ್ದಿಷ್ಟ ಗುರಿ ತಲುಪಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಮಳೆ ಹೆಚ್ಚಾಗುತ್ತಿರುವ ಕಾರಣ ಜನರಿಗೆ ಯಾವುದೇ ಹಾನಿ ಆಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳಿ. ಹೋಬಳಿ ಮಟ್ಟದ ತಂಡ ರಚಿಸಿ ಯಾವುದೇ ಅನಾಹುತಗಳಾಗಂತೆ ಎಚ್ಚರವಹಿಸಿ ಎಂದು ಸಕಲೇಶಪುರ ಉಪ ವಿಭಾಗಾಧಿಕಾರಿ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ತಿಳಿಸಿದರು.