ಹಾಸನ: ನಗರದ ಹುಣಸಿನಕೆರೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಫೆ.8ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ವಿರೋಧಿಸಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವುದಾಗಿ ಧಾರ್ಮಿಕ ಮುಖಂಡ ಮೂಹಮ್ಮದ್ ಅನ್ವರ್ ಸಾದಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ದೇಶದ ಆಡಳಿತಾರೂಢ ಸರ್ಕಾರವು ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ದೇಶದ ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ, ಹಿಂದುಳಿದ ವರ್ಗ ಹಾಗೂ ಮೂಲನಿವಾಸಿಗಳ ಪೌರತ್ವ ಹಾಗೂ ಅವರಿಗೆ ಸಂವಿಧಾನದತ್ತವಾಗಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಪ್ರಜಾಸತ್ತಾತ್ಮಕವಾಗಿ ದೊರೆತಿರುವ ಮತ ಚಲಾವಣೆಯ ಹಕ್ಕನ್ನು ಮೊಟಕುಗಳಿಸುವ ಹುನ್ನಾರವಾಗಿದೆ ಎಂದು ದೂರಿದರು.
ದುರುದ್ದೇಶಪೂರ್ವಕದಿಂದ ಜಾರಿಗೆ ತರಲಾಗಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವ ಸಲುವಾಗಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಏರ್ಪಡಿಸಲಾಗಿದೆ ಎಂದು ಮೂಹಮ್ಮದ್ ಅನ್ವರ್ ಸಾದಿ ಹೇಳಿದರು.