ಹಾಸನ: ಕೊರೊನಾ ವೈರಸ್ ವಿಶ್ವವನ್ನೇ ಕಾಡುತ್ತಿರುವಾಗ ಲಾರಿ ಚಾಲಕರ ಸುರಕ್ಷತೆ ಬಗ್ಗೆ ಗಮನ ನೀಡುವಂತೆ ಹಾಗೂ ದಿನ ನಿತ್ಯದ ಸೌಕರ್ಯ ನೀಡುವಂತೆ ಆಗ್ರಹಿಸಿ ನಮ್ಮ ಯೂನಿಯನ್ ಟ್ರೇಡ್ ಯೂನಿಯನ್ ನಿಂದ ಲಾರಿ ಚಾಲಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ನಗರದ ಹೊರ ವಲಯ ಬೊಮ್ಮನಾಯಕನಹಳ್ಳಿ, ರಾಜೀವ್ ಕಾಲೇಜು ಬಳಿ ಇರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಕಂಪನಿ ಬಳಿ ಪ್ರತಿಭಟನೆ ನಡೆಸಿದ ಚಾಲಕರು, ಹಾಸನದಿಂದ ಇತರ ಜಿಲ್ಲೆಗಳಿಗೆ ಪೆಟ್ರೋಲ್ ಸಾಗಿಸುವ ಲಾರಿ ಚಾಲಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ಬಂದಾಗ ಒಂದು ಸಾರಿ ಮಾತ್ರ ಊಟ ಕೊಡುತ್ತಾರೆ. ದೂರ ಪ್ರಯಾಣ ಮಾಡುವಾಗ ನಮಗೆ ಊಟ - ತಿಂಡಿ, ನೀರು ಹಾಗೂ ವಾಹನ ರಿಪೇರಿಗೆ ಮೆಕಾನಿಕ್ ಸಿಗುತ್ತಿಲ್ಲ. ಏನು ಕೂಡ ಹೊರಗಡೆ ಸಿಗುತ್ತಿಲ್ಲ. ಚಾಲಕರ ಸುರಕ್ಷತೆಗೆ ಮಾಸ್ಕ್ ಸೇರಿದಂತೆ ಯಾವ ಸೌಕರ್ಯ ನೀಡಿರುವುದಿಲ್ಲ ಎಂದು ದೂರಿದರು.
ಚಾಲಕರು ಕೆಲಸದ ನಿಮಿತ್ತ ಹೊರಗಡೆ ಹೋಗಿ ಏನಾದರೂ ಕೊರೋನಾ ವೈರಸ್ ತಗಲಿದರೇ ಅವರ ಕುಟುಂಬಕ್ಕೆ ಯಾರು ಹೊಣೆ? ಈ ಕಂಪನಿಯಿಂದ ನಮಗೆ ಯಾವ ಸುರಕ್ಷತೆ ಇರುವುದಿಲ್ಲ ಆದ್ದರಿಂದ ಲಾಕ್ ಡೌನ್ ಇರುವ ದಿನಗಳವರಗೂ ಪೆಟ್ರೋಲ್ ಡಿಪೋವನ್ನೇ ಬಂದ್ ಮಾಡಬೇಕು ಎಂದು ಆಗ್ರಹಿಸಿದರು.