ಹಾಸನ: ಅತಿವೃಷ್ಠಿ ಪರಿಹಾರ ಕಾಮಗಾರಿಗಳನ್ನು ಪ್ರಾರಂಭಿಸಲು ಫೆ.15 ರಂದು ಅಂತಿಮ ಗಡುವಾಗಿದ್ದು, ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮವಹಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅತಿವೃಷ್ಠಿ, ಅನಾವೃಷ್ಠಿ ಪರಿಹಾರ ಕಾರ್ಯಗಳು ಹಾಗೂ ಇತರ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲಿಸಿ ಕಾಲಮಿತಿಯೊಳಗೆ ಪ್ರಕೃತಿ ವಿಕೋಪ ಕೆಲಸಗಳನ್ನು ಮುಕ್ತಾಯಗೊಳಿಸಲು ಸ್ಪಷ್ಟ ನಿರ್ದೇಶನ ನೀಡಿದರು.
ಮನೆಗಳ ನಿರ್ಮಾಣ ದುರಸ್ಥಿ ಕಾರ್ಯಗಳು ಬೇಗ ಮುಗಿಯಬೇಕು. ಶಾಲೆಗಳ ದುರಸ್ಥಿ, ರಸ್ತೆ, ಸೇತುವೆ ಕಾಮಗಾರಿಗಳು ಶೀಘ್ರವಾಗಿ ಮುಕ್ತಾಯ ಮಾಡಬೇಕು ಎಂದು ಸಚಿವರು ಹೇಳಿದರು.
ಕಂದಾಯ ಇಲಾಖೆ ಬಗ್ಗೆ ಜನರಿಗೆ ಇರುವ ಅಭಿಪ್ರಾಯ ಬದಲಾಗಬೇಕು. ಅಧಿಕಾರಿಗಳು ನಮ್ಮವರೆಂಬ ಭಾವ ಮೂಡಬೇಕು. ಆ ರೀತಿ ಕೆಲಸ ಮಾಡಿ. ಜನರ ಸಂಕಷ್ಟಗಳನ್ನು ಬಗೆಹರಿಸಿ ಎಂದು ಅವರು ಸೂಚನೆ ನೀಡಿದರು.
ಇನ್ನು ಮುಂದೆ ವೃದ್ಧಾಪ್ಯ ವೇತನಕ್ಕೆ ಜನರು ಅಲೇದಾಡಬಾರದು. ಜಿಲ್ಲಾಡಳಿತವೇ ಆಧಾರ್ ಕಾರ್ಡಲ್ಲಿ 60 ವರ್ಷ ತುಂಬಿರುವ ಅರ್ಹ ಬಡ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರಾತಿ ಮಾಡಿ ಆದೇಶ ಪತ್ರವನ್ನು ಮನೆಗೆ ಕಳಿಸಿಕೊಡಬೇಕು. ಈಗಾಗಲೇ ಉಡುಪಿ ಹಾಗೂ ಬಳ್ಳಾರಿಯಲ್ಲಿ ಈ ಯೋಜನೆ ಜಾರಿಯಾಗಿದೆ. ಹಾಸನದಲ್ಲಿ ಶೀಘ್ರವಾಗಿ ಇದನ್ನು ಪ್ರಾರಂಭಿಸಿ ಎಂದು ಸಚಿವರು ನಿರ್ದೇಶನ ನೀಡಿದರು.