ಸಕಲೇಶಪುರ: ಕ್ಷುಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಹೊಡೆದ ಪರಿಣಾಮ ಆತ ಮೃತ ಪಟ್ಟಿರುವ ಘಟನೆ, ತಾಲೂಕಿನ ಹಾನುಬಾಳ್ ಹೋಬಳಿಯಲ್ಲಿ ನಡೆದಿದೆ.
ತಾಲೂಕಿನ ಹಾನುಬಾಳ್ ಸಮೀಪದ ಕೋಗರವಳ್ಳಿ ಗ್ರಾಮದ ಗಣೇಶ್ (50) ಕೊಲೆಯಾದವರು, ಶುಕ್ರವಾರ ಸಂಜೆ ಮನೆಯಿಂದ ಗ್ರಾಮದ ಅಂಗಡಿಯೊಂದಕ್ಕೆ ಹೋಗಿದ್ದ ವೇಳೆ ರಘು ಎಂಬುವವರ ನಾಯಿ ಗಣೇಶ್ನನ್ನು ಕಚ್ಚಲು ಬಂದಿದೆ. ಈ ಸಂದರ್ಭ ನಾಯಿಯನ್ನು ಕಟ್ಟಿ ಹಾಕುವಂತೆ ಹೇಳಿದ್ದು, ಪರಸ್ಪರ ಮಾತಿನ ಚಕಮಕಿ ನಡೆದಿದೆ. ಬಳಿಕ ರಘು ಹಾಗೂ ಆತನ ಅಪ್ರಾಪ್ತ ವಯಸ್ಸಿನ ಮಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಗಣೇಶ್ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಮೃತಪಟ್ಟಿದ್ದಾರೆ.
ಇನ್ನು ಗಲಾಟೆ ವೇಳೆ, ಬಿಡಿಸಲು ಬಂದಿದ್ದ ಗಣೇಶ್ ಮಗಳು ಹಾಗೂ ಉಮೇಶ್ ಎಂಬಾತನ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಇಬ್ಬರಿಗೆ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂಬಂಧ ಆರೋಪಿಗಳಿಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.