ಹಾಸನ: ಲಾಕ್ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೆಲವು ಸಮುದಾಯದವರಿಗೆ ಮಾತ್ರ ಪ್ಯಾಕೇಜ್ ಘೋಷಣೆ ಮಾಡಿದ್ದು, ಅರ್ಚಕರಿಗೆ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡದೇ ಅನ್ಯಾಯ ಮಾಡಿದ್ದಾರೆ ಎಂದು ಅರ್ಚಕರ ಸಂಘ ಆರೋಪ ಮಾಡಿತ್ತು. ಈ ಬಗ್ಗೆ ಮಾಜಿ ಸಚಿವ ಎಚ್. ಡಿ. ರೇವಣ್ಣನವರ ಗಮನವನ್ನು 2 ತಿಂಗಳ ಹಿಂದೆ ಈಟಿವಿ ಭಾರತದ ಮೂಲಕ ಸೆಳೆಯಲಾಗಿತ್ತು.
ಮೇ. 5ರಂದು, ಅರ್ಚಕರ ಶಾಪದಿಂದ ದೇಶಕ್ಕೆ ಗಂಡಾಂತರ ಬಂದಿದೆ ಎಂಬ ತಲೆಬರಹದಡಿ ಈಟಿವಿ ಭಾರತ ಸುದ್ದಿಯೊಂದನ್ನು ಪ್ರಕಟ ಮಾಡಿದ್ದು, ಸುದ್ದಿಗೆ ಸ್ಪಂದಿಸಿದ ಸರ್ಕಾರ ಈಗ ಅರ್ಚಕರ ಖಾತೆಗೆ ತಸ್ತಿಕ್ ರೂಪದಲ್ಲಿ ಹಣ ಬಿಡುಗಡೆ ಮಾಡುತ್ತಿದ್ದು, ಇದು ಈಟಿವಿ ಭಾರತದ ಫಲಶ್ರುತಿಯಾಗಿದೆ. ಅರ್ಚಕರ ಖಾತೆಗೆ ತಸ್ತಿಕ್ ರೂಪದಲ್ಲಿ ಹಣ ಬಿಡುಗಡೆಯಾಗಿದೆ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಸ್ಪಷ್ಟನೆ ನೀಡಿದರು.
ಹೊಳೆನರಸೀಪುರ ಮತ್ತೆ ಹಾಫ್ ಡೇ ಲಾಕ್ ಡೌನ್: ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಸಾವಿನ ಸಂಖ್ಯೆಯೂ ಜಿಲ್ಲೆಯಲ್ಲಿ ನಿತ್ಯ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರೀತಿಯಲ್ಲಿಯೇ ಹೊಳೆನರಸೀಪುರದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಹಾಫ್ ಡೇ ಲಾಕ್ ಡೌನ್ ಮಾಡಲು ಈಗಾಗಲೇ ವರ್ತಕರ ಸಂಘ ಹಾಗೂ ಕೆಲವು ಸಂಘಟನೆಗಳು ತೀರ್ಮಾನ ಮಾಡಿದ್ದು, ಇಂದಿನಿಂದ ಲಾಕ್ ಡೌನ್ ಅಸ್ತಿತ್ವಕ್ಕೆ ಬರಲಿದೆ.
ಅನಗತ್ಯವಾಗಿ ಓಡಾಡುವ ವ್ಯಕ್ತಿಗಳ ಹಾಗೂ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಎಚ್. ಡಿ. ರೇವಣ್ಣ ಮನವಿ ಮಾಡಿದರು.