ಹಾಸನ: ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ನನ್ನನ್ನು ಅರಸೀಕೆರೆಯ ಭಗೀರಥ ಅಂತ ಕರೆದಿದ್ರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ತಿರುಗೇಟು ನೀಡಿದ್ದಾರೆ.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, 'ನಾನು ನನ್ನ ಕಚೇರಿಯಲ್ಲಿ ಮಾತನಾಡಿದ ಆಡಿಯೋವನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡಿದ್ದಾರೆ. ಆದರೆ ಆಡಿಯೋವನ್ನು ಎಡಿಟ್ ಮಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನದು ಕೀಪ್ಯಾಡ್ ಫೋನ್. ನನಗೆ ಸ್ಮಾರ್ಟ್ಫೋನ್ ಬಳಸಲು ಬರುವುದಿಲ್ಲ. ನಾನು ಮಾತನಾಡಿದ ಮಾತನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ'ಎಂದು ಆರೋಪಿಸಿದ್ದಾರೆ.
ಹಾಸನದ ಜಿಲ್ಲೆಯ ಅರಸೀಕೆರೆಯಲ್ಲಿ ಫ್ಲೋರೈಡ್ಯುಕ್ತ ನೀರನ್ನು ಜನರು ಕುಡಿಯುತ್ತಿದ್ದರು. ಇದನ್ನು ಮನಗಂಡ ನಾನು 2009ರಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರ ಮನೆಗೆ ಮತ್ತು ಕಚೇರಿಗೆ ಅಲೆದು ಅಲೆದು ಕೊನೆಗೆ ಅರಸೀಕೆರೆಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಿದ್ದೇನೆ. ಅದರ ಕಷ್ಟ ಏನೆಂಬುದು ನನಗೆ ಗೊತ್ತಿದೆ. ಈಗ ಆರು ತಿಂಗಳಲ್ಲಿ ಬಂದಿರುವ ಇವರಿಗೆ ಏನು ಗೊತ್ತು ಎಂದು ಸಂತೋಷ್ ವಿರುದ್ಧ ಶಾಸಕ ಶಿವಲಿಂಗೇಗೌಡ ಗುಡುಗಿದರು.
ದನ್ನೂ ಓದಿ: ಕಿರುಕುಳ ಮುಂದುವರಿದ್ರೆ, ಡೆತ್ನೋಟ್ ಬರೆದಿಟ್ಟು ಸಾಯುತ್ತೇವೆ: ಅರಸೀಕೆರೆ ನಗರಸಭೆ ಸದಸ್ಯೆ ಎಚ್ಚರಿಕೆ
ಎರಡನೇ ವಾರ್ಡ್ನ ಕಲೈ ಅರಸಿ, ನನಗೆ ಬೆಂಬಲ ಸೂಚಿಸುವಂತೆ ಕರೆದುಕೊಂಡು ಹೋಗಿ ನಂತರ ರಾಜೀನಾಮೆ ಕೊಡುವ ವಿಚಾರ ಎಂದಾಗಲೇ ನನಗೆ ಗೊತ್ತಾಗಿದ್ದು. ಹಾಗಾಗಿ ನಾನು ಜೆಡಿಎಸ್ ಪಕ್ಷ ತೊರೆಯುವುದಿಲ್ಲ ಅಂತ ವಾಪಸ್ ಅವರಿಗೆ ಹೇಳಿ ಬಂದಿದ್ದೇನೆ. ಅವರು ನನಗೆ 25ಲಕ್ಷ ಆಮಿಷವೊಡ್ಡಿ ನಮ್ಮ ಮನೆಗೆ ಬಂದು 10 ಲಕ್ಷ ಇಟ್ಟು ಹೋಗಿದ್ದಾರೆ ಅಂತ ಅವರು ಹೇಳಿದ್ದನ್ನೇ ನಾನು ಹೇಳಿದ್ದು ಅಂತ ಜೇನುಕಲ್ ಸಿದ್ದೇಶ್ವರ ದೇವರ ಮೇಲೆ ಆಣೆ ಪ್ರಮಾಣ ಮಾಡಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದನ್ನು ವಿವರಿಸಿದರು.
ಇದನ್ನೂ ಓದಿ: ಶಾಸಕ ಶಿವಲಿಂಗೇಗೌಡ ವಿರುದ್ಧ ಕಾನೂನು ಹೋರಾಟ: ಎನ್.ಆರ್. ಸಂತೋಷ್
ಅರಸೀಕೆರೆ ನಗರಸಭೆಯ ವಿದ್ಯಾಧರ ಎಂಬುವರನ್ನು ಹಿಂದೆ ನಾನೇ ಪುರಸಭೆಯ ಅಧ್ಯಕ್ಷನಾಗಿ ಮಾಡಿದ್ದೆ. ಅವರನ್ನು ಅಧ್ಯಕ್ಷನನ್ನಾಗಿ ಮಾಡಲು ನಾನು ಪಟ್ಟ ಶ್ರಮ ನನಗೆ ಗೊತ್ತು. ಅಂಥಹದ್ದರಲ್ಲಿ ಇವತ್ತು ಆತನೇ ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಾನೆ ಎಂದರೆ ನನಗೆ ಹೊಟ್ಟೆ ಉರಿಯೋವುದಿಲ್ವಾ? ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.