ಹಾಸನ: 2014 ರಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ 6 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಮೂರು ಸರ್ಕಾರಗಳು ಬದಲಾದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ. ಕಳೆದ ಮೈತ್ರಿ ಸರ್ಕಾರದಲ್ಲಿ ಮತ್ತು ಈ ಬಾರಿಯ ಬಜೆಟ್ನಲ್ಲಿ ಹಣ ಬಿಡುಗಡೆ ಮಾಡಿದ್ದರೂ ಯೋಜನೆಗೆ ಮಾತ್ರ ಅಡ್ಡಿ - ಆತಂಕಗಳು ಎದುರಾಗುತ್ತಲೇ ಇವೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಹಾಸನದ ಬೇಲೂರು, ಅರಸೀಕೆರೆ, ಭಾಗಗಳಿಗೆ ನೀರುಣಿಸುವ ಯೋಜನೆ ಎತ್ತಿನಹೊಳೆ ಕುಡಿಯುವ ನೀರು ಯೋಜನೆ. 2014ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದ್ದು, ಕಳೆದ ಆರು ವರ್ಷಗಳಿಂದ ಕಾಮಗಾರಿ ಕುಂಟುತ್ತಲೇ ಸಾಗಿದೆ. ಕಾರಣ ಒಂದು ಕಡೆ ಭೂಸ್ವಾಧೀನ ಪ್ರಕ್ರಿಯೆ, ಮತ್ತೊಂದು ಕಡೆ ಹಣದ ಸಮಸ್ಯೆ ಜೊತೆಗೆ ಈಗ ಕೊರೋನಾ ಪ್ರಕರಣದಿಂದ ಆಂಧ್ರಪ್ರದೇಶ, ಬಿಹಾರಿ ಕೂಲಿ ಕಾರ್ಮಿಕರು ತಮ್ಮ ತಮ್ಮ ರಾಜ್ಯಕ್ಕೆ ಹೋಗಿದ್ದರಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುವ ಪ್ರಮುಖ ಕಾರಣ ಎನ್ನಬಹುದು.
ಇನ್ನು ಇಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸಕಲೇಶಪುರ ಶಾಸಕ ಹೆಚ್ ಕೆ ಕುಮಾರಸ್ವಾಮಿ, ಹಾಗೂ ಬೇಲೂರು ಶಾಸಕ ಕೆಎಸ್ ಲಿಂಗೇಶ್, ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಸಕಲೇಶಪುರದ ಆನೆಮಹಲ್ ಸಮೀಪದ ಕಪ್ಪಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಚಿವರು ಹೇಳುವ ಪ್ರಕಾರ ಮುಂದಿನ ಮಾರ್ಚ್ ಒಳಗಡೆ ಮೊದಲ ಹಂತದ ನೀರನ್ನು ಸುಮಾರು 37 ಕಿಲೋಮೀಟರ್ ದೂರಕ್ಕೆ ನೀರನ್ನು ಲಿಫ್ಟ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದು, ಹಣದ ಸಮಸ್ಯೆ ಎದುರಾದರೆ ತಕ್ಷಣ ಮುಖ್ಯಮಂತ್ರಿಗಳ ವಿಶೇಷ ಸಭೆ ಕರೆದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಇನ್ನು ಈಗಾಗಲೇ ಎತ್ತಿನಹೊಳೆ ಬರುತ್ತದೆ ಎಂದು ನಾವು ನಿರೀಕ್ಷೆಯಲ್ಲಿದ್ದೇವೆ. ಕೊರೋನಾ ಪ್ರಕರಣದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಆದರೆ ಈಗಾಗಲೇ ಮೊದಲ ಹಂತದ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಅರಸೀಕೆರೆ-ತಿಪಟೂರುವರೆಗೆ ನೀರು ಹರಿಯಲಿದೆ. ಅದರಲ್ಲಿ ಅನುಮಾನವಿಲ್ಲ ಸಕಲೇಶಪುರದಿಂದ ಆಲೂರು ಸಮೀಪದ ಅರುವನಹಳ್ಳಿ ಬಳಿ ನಿರ್ಮಿಸಲಾಗಿರುವ ಸ್ಟೋರೇಜ್ ಟ್ಯಾಂಕಿಗೆ ನೀರನ್ನು ಹರಿಸಿ ಅಲ್ಲಿಂದ ನೀರನ್ನು ಲಿಫ್ಟ್ ಮಾಡಿ ಮೊದಲ ಹಂತಕ್ಕೆ ಚಾಲನೆ ದೊರೆಯಲಿದೆ. ಇದು ಸಂತೋಷಕರ ವಿಚಾರ ಎಂದು ಅರಸಿಕೆರೆ ಶಾಸಕ ಅಭಿಪ್ರಾಯ ವ್ಯಕ್ತಪಡಿಸಿದರು.
ಜೊತೆಗೆ ಕೋರೋನಾ ಪ್ರಕರಣದಿಂದ ಎತ್ತಿನಹೊಳೆ ಯೋಜನೆಯ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರಿ ಮೂಲದ ನೂರಾರು ಕಾರ್ಮಿಕರು ತಮ್ಮ ರಾಜ್ಯಕ್ಕೆ ಹೋಗಿದ್ದರಿಂದ 50ರಿಂದ 60 ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ಹೀಗಾಗಿ ಮೊದಲಿನ ರೀತಿಯಲ್ಲಿ ಕೆಲಸ ಸಾಗದೆ ಕುಂಟುತ್ತಾ ಸಾಗುತ್ತದೆ ಎನ್ನುವುದು ಕಾರ್ಮಿಕರ ಮಾತು.
ಒಟ್ಟಾರೆ ಆರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾಮಗಾರಿ ಕೊನೆಗೂ ಮುಂದಿನ ಮಾರ್ಚ್ ಒಳಗೆ ಮೊದಲ ಹಂತದ ನೀರು ಹರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಈಗಾಗಲೇ 12,500 ಕೋಟಿ ರೂಪಾಯಿಗಳಲ್ಲಿ ಕೇವಲ 4,000 ಕೋಟಿ ಮಾತ್ರ ಬಿಡುಗಡೆಯಾಗಿದೆ. ಉಳಿದ ಹಣ ಬೇಗ ಬಿಡುಗಡೆಯಾದರೆ ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಭಾಗಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಯಥೇಚ್ಛವಾಗಿ ಹರಿಯುವುದರಲ್ಲಿ ಯಾವುದೇ ಸಂಶಯವಿಲ್ಲ.