ಹಾಸನ: ಬರಪೀಡಿತ ಪ್ರದೇಶ ಅರಸೀಕೆರೆಗೆ ಇವತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶಾಸಕ ಕೆ ಎಂ ಶಿವಲಿಂಗೇಗೌಡ ಮೋಟಾರ್ ಸ್ವಿಚ್ ಒತ್ತುವ ಮೂಲಕ ಚಾಲನೆ ನೀಡಿದರು.
ಜಿಲ್ಲೆಯ ಬರ ಪೀಡಿತ ಪ್ರದೇಶದಲ್ಲಿ ಒಂದಾದ ಅರಸೀಕೆರೆಯಲ್ಲಿ ಮೊದಲಿನಿಂದಲೂ ಕೂಡ ಕುಡಿಯುವ ನೀರಿಗೆ ತತ್ವಾರವಿದೆ. ಅಲ್ಲದೆ ಈ ಭಾಗದಲ್ಲಿ ಫ್ಲೋರೈಡ್ ಯುಕ್ತ ನೀರನ್ನೇ ಬಳಸುತ್ತಿರುವುದರಿಂದ ತಾಲೂಕಿನ ಹಲವು ಗ್ರಾಮಗಳಲ್ಲಿನ ಜನರು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದರಿಂದ ಕಳೆದ ಮೂರು ದಶಕಗಳಿಂದಲೂ ಹೇಮಾವತಿ ನೀರು ತಾಲೂಕಿಗೆ ಬೇಕೆಂಬ ಬೇಡಿಕೆಯನ್ನು ಸರ್ಕಾರಕ್ಕೆ ಇಡುತ್ತಲೇ ಬಂದಿದ್ದರು. ಚನ್ನರಾಯಪಟ್ಟಣದ ಗನ್ನಿಗಡ ಸಮೀಪವಿರುವ ಹೇಮಾವತಿ ನಾಲೆಯಿಂದ ಅರಸೀಕೆರೆಗೆ ನೀರನ್ನ ಕೊಂಡೊಯ್ಯುವ ಯೋಜನೆಗೆ 2013ರ ಬಿಜೆಪಿ ಸರ್ಕಾರದಲ್ಲಿ 1200 ಕೋಟಿಯನ್ನು ನೀಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಇದರ ಜೊತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಕೂಡ ಕುಮಾರಸ್ವಾಮಿಯ 20-20 ಸರ್ಕಾರದಲ್ಲಿ ಅನುಮೋದನೆ ಪಡೆದು ಶಾಸಕ ಕೆ ಎಂ ಶಿವಲಿಂಗೇಗೌಡ ಶಂಕುಸ್ಥಾಪನೆ ನೆರವೇರಿಸಿದ್ದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸದ್ಯ ಸಂಪೂರ್ಣವಾಗಿದ್ದು, ಇವತ್ತು ಅದಕ್ಕೆ ಶಾಸಕರು ಚಾಲನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಎರಡು ತಿಂಗಳಲ್ಲಿ ಅರಸೀಕೆರೆ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನ ಹರಿಸುವ ಭರವಸೆಯನ್ನೂ ನೀಡಿದ್ದಾರೆ.